ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ ಕಾರ್ಯಕ್ರಮ
ಕೈಕಂಬ:ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ ಕಾರ್ಯಕ್ರಮ ಗುರುಪುರ ಪ್ರಖಂಡದ ವತಿಯಿಂದ ಎಡಪದವು ಮಿಜಾರ್ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಆಶೀರ್ವಚನ ನೀಡಿದ ಮೂಡಬಿದ್ರಿ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ನೂರಾರು ಮತ, ಪಂಥ, ಸಂಸ್ಕೃತಿಗಳನ್ನು ಒಳಗೊಂಡ ಧರ್ಮ ಸನಾತನ ಹಿಂದೂ ಧರ್ಮ. ಬೌದ್ಧರೂ ಹಿಂದುಗಳೇ, ಜೈನರೂ ಹಿಂದುಗಳೇ ಎಲ್ಲವೂ ಸೇರಿದ ಸನಾತನ ಹಿಂದೂ ಧರ್ಮ ಶ್ರೇಷ್ಠ ಧರ್ಮವಾಗಿದೆ. ತಾನು ಬದುಕಬೇಕು ಬೇರೆಯವರೂ ಬದುಕಬೇಕು ಎಂಬ ಆದರ್ಶವನ್ನು ಜಗತ್ತಿಗೆ ಸಾರಿದ ಶ್ರೀಮಂತ ಧರ್ಮವಾಗಿದೆ.ಆಧುನಿಕತೆ ಮತ್ತು ಪರಂಪರೆಯನ್ನು ಒಂದುಗೂಡಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಮಾಡುತ್ತಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, 60 ವರ್ಷಗಳ ಹಿಂದೆ 1964 ರಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭವಾದ ಬಳಿಕ ದೇಶದಲ್ಲಿ ಮಹತ್ತರ ಬದಲಾವಣೆ ನಡೆಯಿತು. ಅಪಾಯದಲ್ಲಿ ಸಿಲುಕಿದ್ದ ಹಿಂದೂಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿದೆ. ಇಡೀ ದೇಶದಲ್ಲಿ ಹಿಂದೂಗಳು ಜಾಗೃತಗೊಳ್ಳುವಂತಯಿತು. ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಗೆ ಕಾರಣವಾಯಿತು. ದೇಶದ ಪ್ರತೀ ಗ್ರಾಮಗಳಲ್ಲಿಯೂ ಹಿಂದೂ ಧರ್ಮದ ಜಾಗೃತಿಯನ್ನು ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಕೆಸರಿ ಶಾಲು ಹಾಕಲು ಭಯ ಪಡುತ್ತಿದ್ದ ಕಾಲವನ್ನು ಬದಲಾಯಿಸಲು ಸಂಘಟನೆ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಪುರ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್ ವಹಿಸಿದ್ದರು.
ಶ್ರೀಮತಿ ಪ್ರೇಮಾ ವಿ. ಶೆಟ್ಟಿ ಮುಂಡಬೆಟ್ಟು ಮತ್ತು ಶ್ರೀಮತಿ ಶಾಲಿನಿ ಭಾಸ್ಕರ ಸೇಮಿತ ಮಿಜಾರು ಮುಂಡಬೆಟ್ಟು ಅವರುಗಳನ್ನು ಇದೇ ವೇಳೆ ಶಾಲು ಹೊದೆಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್,ಸಂಜೀವ ನಲಿಕೆ, ಬೈಲು ಕಂದಾವರ ಮೂಡುಕರೆ, ಕುಡುಬಿ ಸಮಾಜ ಬೆಳ್ಳಿಬೆಟ್ಟುಗುತ್ತು ಕೊಂಪದವು ಇದರ ಗುರಿಕಾರ ಅಪ್ಪು ಗೌಡ, ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ಭುಜಂಗ ಕುಲಾಲ್ ಅದ್ಯಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುಪುರ ಪ್ರಖಂಡ ಕಾರ್ಯದರ್ಶಿ ದಿನೇಶ್ ಮಿಜಾರ್ ಸ್ವಾಗತಿಸಿದರು. ರವಿ ಸುವರ್ಣ ನಿರೂಪಿಸಿ, ವಂದಿಸಿದರು.
ಸಂಸದ ಕ್ಯಾ|ಬ್ರಿಜೇಶ್ ಚೌಟ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು, ಧಾರ್ಮಿಕ ಮುಖಂಡರುಗಳು, ಮಹಿಳೆಯರು ಸೇರಿದಂತೆ 2000 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು
ಕಾರ್ಯಕ್ರಮಕ್ಕೆ ಮುನ್ನ ಎಡಪದವು ಶ್ರೀ ರಾಮ ಮಂದಿರದಿಂದ ಶಾಸ್ತಾವು ಸಭಾಂಗಣದವರೆಗೆ ನಡೆದ ಜಾಥಾಕ್ಕೆ ಶಾಸಕ ಭರತ್ ಶೆಟ್ಟಿ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿ, ಬುಲೆಟ್ ಏರಿ ಕಾರ್ಯಕರ್ತರ ಜೊತೆ ಜಾಥಾದಲ್ಲಿ ಸಾಗಿದರು. ಶಾಸ್ತಾವು ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.