ಕೈಕಂಬ: ಇನ್ನೂ ಬಾರದ ಸೇತುವೆ ಪರಿಶೀಲನೆ ಯಂತ್ರ; ಬಸ್ ಸಂಚಾರಕ್ಕಾದರೂ ಅವಕಾಶ ಕೊಡಿ ಎಂದ ಸ್ಥಳೀಯರು
ಕೈಕಂಬ: ಪೊಳಲಿ ಕ್ಷೇತ್ರವನ್ನು ಸಂಪರ್ಕಿಸುವ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಇಲ್ಲಿ ಈಗಾಗಲೇ ಘನ ವಾಹನ ಸಂಚಾರ ಸ್ಥಗಿತವಾಗಿದೆ. ಸೇತುವೆಯಲ್ಲಿ ಏಕಾಏಕಿ ಘನ ವಾಹನ ಸಂಚಾರ ನಿಷೇಧಿಸಿ ಗಾರ್ಡ್ ಅಳವಡಿಸಿರುವುದರಿಂದ ಶಾಲಾ ವಾಹನಗಳು, ಬಸ್ಸುಗಳು ಸಂಚರಿಸಲಾಗದೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಿಥಿಲಗೊಂಡಿದೆ ಎಂಬ ಶಂಕೆಯಿಂದ, ಜಿಲ್ಲಾಡಳಿತದಿಂದ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಪೊಳಲಿ ಅಡ್ಡೂರಿನ ಸೇತುವೆಯ ಧಾರಣಾ ಶಕ್ತಿಯ ಪರೀಕ್ಷೆಗಾಗಿ ಕಳೆದ ಸೋಮವಾರ ಬೆಂಗಳೂರಿನಿಂದ ಬರಲಿದೆ ಎಂದಿರುವ ಆಧುನಿಕ ಯಂತ್ರ ಬುಧವಾರದವರೆಗೂ (ಆ. 28) ಬಂದಿಲ್ಲ.
ಅಡ್ಡೂರು ಸೇತುವೆಯಲ್ಲಿ ಎಷ್ಟು ಭಾರದ ವಾಹನಗಳು ಸಂಚರಿಸಬಹುದು ಎಂಬುದನ್ನು ಆಧುನಿಕ ಯಂತ್ರದ ಮೂಲಕ ಪರೀಕ್ಷೆ ನಡೆಸಿ ಸೇತುವೆಯ ಬಾಳ್ವಿಕೆಯ ಬಗ್ಗೆ ತಜ್ಞರನ್ನು ಒಳಗೊಂಡ ಆಧುನಿಕ ಯಂತ್ರ ಸೋಮವಾರ ಬರಲಿದೆ, ತಜ್ಞರ ವರದಿ ಆಧಾರಿಸಿ ಬಸ್ಸು ಸಹಿತ ಘನ ವಾಹನಗಳ ಸಂಚಾರದ ಬಗ್ಗೆ ತೀರ್ಮಾನಿಸಲಾಗುವುದು ಕಳೆದ ಶುಕ್ರವಾರ ಅಡ್ಡೂರು ಸೇತುವೆ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಹೇಳಿದ್ದರು.
ಆದರೆ ಬುಧವಾರದವರೆಗೂ ಯಂತ್ರದ ಸುಳಿವಿಲ್ಲ. ಲೋಕೋಪಯೋಗಿ ಇಲಾಖೆ ಮೂಲದ ಪ್ರಕಾರ ಆಧುನಿಕ ಯಂತ್ರದ ಬಿಡಿ ಭಾಗವೊಂದು ಇದಾಗಲೇ ಬರಬೇಕಿದ್ದು, ಅದು ಬಂದ ಬಳಿಕ ಯಂತ್ರ ದುರಸ್ಥಿಯಾಗಿ ಬೆಂಗಳೂರಿನಿಂದ ಯಂತ್ರ ಅಡ್ಡೂರಿಗೆ ಆಗಮಿಸಲಿದೆ. ಯಂತ್ರ ಇಂದು ಅಥವಾ ನಾಳೆ ಬರುವ ಸಾಧ್ಯತೆ ಇದೆ.
ಸೇತುವೆಯಲ್ಲಿ ಘನ ವಾಹನ ಸಂಚರಿಸುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೇತುವೆಯನ್ನು ಪ್ರವೇಶಿಸುವ ಎರಡೂ ಕಡೆಗಳಲ್ಲಿ 2.7ಎತ್ತರದ ಕಮಾನುಗಳನ್ನು ಅಳವಡಿಸಿದ್ದು, ಇಲ್ಲಿ ಬಸ್ಸು ಮತ್ತು ಬೃಹತ್ ಲಾರಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ಗೂಡ್ಸ್ ಟೆಂಪೋಗಳು, ಮಿನಿ ಲಾರಿಗಳು ಸಂಚರಿಸುತ್ತಿವೆ.
ಗೂಡ್ಸ್ ಟೆಂಪೋ ಗಳು, ಮಿನಿ ಲಾರಿಗಳು ಸೇತುವೆಯಲ್ಲಿ ಸಂಚರಿಸಬಹುದಾದರೆ ಬಸ್ಸುಗಳು ಕೂಡಾ ಸಂಚರಿಸಬಹುದಲ್ಲವೇ? ಬಸ್ಸುಗಳ ಸಂಚಾರ ನಿರ್ಬಂಧದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಬಸ್ಸುಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ. ಬಸ್ಸುಗಳು ಇತ್ತ ಕಡೆ ಸಂಚರಿಸದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸ್ಥಳೀಯರು ಬಸ್ ಸಂಚಾರಕ್ಕಾದರೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.