ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಳೆ ಮೀನು-ಮಾಂಸ ಮಾರಾಟ ಬಂದ್, ಆದೇಶ ಮೀರಿದರೆ ಕಾನೂನು ಕ್ರಮ
ನಾಳೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಈ ಹಬ್ಬದ ಪ್ರಯುಕ್ತ ಬೆಂಗಳೂರಿನಾದ್ಯಂತ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿ ವಧೆ ಮತ್ತು ಮಾಂಸದ ಅಂಗಡಿಗಳಲ್ಲಿ ಮಾಂಸ ಮಾರಾಟವನ್ನು ಮಾಡುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಹೌದು ಕಸಾಯಿಖಾನೆಗಳಲ್ಲಿ ಪ್ರಾಣಿಗಳನ್ನು ವಧೆ ಮಾಡುವುದು ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ನಾಳೆ (ಆಗಸ್ಟ್ 26) ನಿಲ್ಲಿಸುವಂತೆ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆ ದಿನ ಯಾರೂ ಯಾವುದೇ ರೀತಿಯ ಮಾಂಸ ಹಾಗೂ ಹಸಿ ಮೀನು ಮಾರಾಟ ಮಾಡಬಾರದು ಎಂದು ತಿಳಿಸಲಾಗಿದೆ. ಆದೇಶ ಮೀರಿ ಮಾಂಸ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.