ಮಂಗಳೂರು: ಆಸ್ತಿ-ಚಿನ್ನಾಭರಣಕ್ಕಾಗಿ ನಿವೃತ್ತ ಶಿಕ್ಷಕನನ್ನು ಕೊಂದ ಅಳಿಯ-ಮೊಮ್ಮಗ; ಇಬ್ಬರ ಬಂಧನ

ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ನಿವೃತ್ತ ಶಿಕ್ಷಕನನ್ನು ಮನೆ ಅಂಗಳದಲ್ಲಿಯೇ ಅಳಿಯ ಹಾಗೂ ಮೊಮ್ಮಗ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳಾಲಿಯಲ್ಲಿ ನಡೆದಿದೆ. 80 ವರ್ಷದ ಬಾಲಕೃಷ್ಣ ಭಟ್ ಕೊಲೆಯಾದ ದುರ್ದೈವಿ.
ಆಸ್ತಿ ಹಾಗೂ ಚಿನ್ನಾಭರಣದ ಆಸೆಗೆ ಬಿದ್ದ ಅಳಿಯ ತನ್ನ ಹೆತ್ತ ಮಗನೊಂದಿಗೆ ಸೇರಿ ಮಾವನನ್ನೇ ಕೊಲೆ ಮಾಡಿದ್ದಾನೆ. ಜ್ಯೋತಿಷಿ ಆಗಿರುವಂತಹ ಅಳಿಯ ರಾಘವೇಂದ್ರ ಕೆಧಿಲಾಯ (53) ಹಾಗೂ ಆತನ ಮಗ ಮುರಳಿ ಕೃಷ್ಣ (20) ಮಾವನನ್ನೇ ಕೊಲೆ ಮಾಡಿದ ಹಂತಕರು.
ನಿವೃತ್ತ ಶಿಕ್ಷಕರಾಗಿದ್ದ ಬಾಲಕೃಷ್ಣ ಭಟ್ ಅವರ ಪತ್ನಿ ಲೀಲಾ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿಯ ಆಭರಣ ಹಾಗೂ ಆಸ್ತಿಯನ್ನು ಮಗಳು ಹಾಗೂ ಅಳಿಯ ರಾಘವೇಂದ್ರ ಕೆಧಿಲಾಯಗೆ ನೀಡದೆ ಆಸ್ತಿ ಪತ್ರ ಮತ್ತು ಚಿನ್ನಾಭರಣವನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದರು. ಪತ್ನಿಯ ತವರು ಮನೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ರಾಘವೇಂದ್ರ ತನ್ನ ಮಗ ಮುರಳಿ ಕೃಷ್ಣನ ಜೊತೆ ಸೇರಿ ಮಾವನನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಅಡ್ಡೂರು ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಹೇಳಿಕೆ ನೀಡಿದ ಶಾಸಕ ಭರತ್ ಶೆಟ್ಟಿಯ ವಿರುದ್ಧ SDPI ದೂರು ದಾಖಲು
ಕಾಸರಗೋಡಿನಿಂದ ಮಾನವ ಮನೆ ಬೆಳಾಲಿಗೆ ಬಂದ ಅಪ್ಪ-ಮಗ ಬಾಳೆ ಎಲೆಯಲ್ಲಿ ಊಟ ಮಾಡಿ ನಂತರ ಮಾರಕಾಸ್ತ್ರಗಳಿಂದ ಹೊಡೆದು ಮಾವನನ್ನು ಹತ್ಯೆ ಮಾಡಿದ್ದಾರೆ. ಬಳಿಕ ನಲ್ಲಿ ನೀರಿನ ಕೆಳಗೆ ಹಾಕಲಾಗಿದ್ದ ಹಾಸುಕಲ್ಲನ್ನು ತಲೆಯ ಮೇಲೆ ಇಟ್ಟು ಎಸ್ಕೇಪ್ ಆಗಿದ್ದಾರೆ. ಈ ಬಾಳೆ ಎಲೆಯನ್ನು ಆಧರಿಸಿ ಖರರ್ನಾಕ್ ಅಪ್ಪ-ಮಗನನ್ನು ಪೊಲೀಸರು ಬಂಧಿಸಿದ್ದಾರೆ.