ಬಂಟ್ವಾಳದಲ್ಲಿ ಬಿಜೆಪಿಯ ಸಂಘಟನೆ ಪ್ರಬಲವಾಗಿದೆ: ಸಂಸದ ಕ್ಯಾ.ಬ್ರಿಜೇಶ್ ಚೌಟ
ಬಂಟ್ವಾಳ : ತಾಲೂಕಿನ ರಾಜಕೀಯ ಚಿತ್ರಣ ಬದಲಾಗಿದ್ದರೂ, ಬಂಟ್ವಾಳದಲ್ಲಿ ಬಿಜೆಪಿಯ ಸಂಘಟನೆ ಪ್ರಬಲವಾಗಿದೆ.ಜಾತಿ ರಾಜಕಾರಣದ ಮೂಲಕ ಷಡ್ಯಂತ್ರ ನಡೆಸಲು ಹೊರಟವರಿಗೆ ಕ್ಷೇತ್ರದ ಮತದಾರರು ತಕ್ಕಪಾಠ ಕಲಿಸಿ ನನ್ನನ್ನು ಬಹುಮತದಿಂದ ಆರ್ಶೀವದಿಸಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಹಾಗೂ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಹಿಂದೂ ವಿಚಾರಗಳನ್ನು ವಿರೋಧಿಸುತ್ತಿದ್ದ ದೇಶದ ಎಲ್ಲಾ ಶಕ್ತಿಗಳು ಒಂದಾಗಿತ್ತು,ಆದರೆ ಜನತೆಯ ಅಶೀರ್ವಾದದಿಂದ ನರೇಂದ್ರ ಮೋದಿಯವರು ಬಹುಮತದ ಜೊತೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ ಎಂದ ಅವರು ಮೋದಿಯವರು ಅದ್ಬುತವಾದ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು,ಅವುಗಳನ್ನು ಆರ್ಹ ಫಲಾನುಭವಿಗೆ ತಲುಪಿಸುವ ಮತ್ತು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅದ್ಯತೆಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಇದಕ್ಕಾಗಿ ಜಿಲ್ಲೆ ಮತ್ತು ತಾಲೂಕುಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದರು.
ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿ:
ಕರ್ನಾಟಕ ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿ ನಿರ್ಮಾಣವಾಗಿದ್ದು,ಕಾಂಗ್ರೆಸ್ ನಾಯಕರು ಸುಳ್ಳನ್ನು ಹೇಳಿ, ಅವೈಜ್ಞಾನಿಕ ಕಾರ್ಯಕ್ರಮಗಳನ್ನು ಗ್ಯಾರಂಟಿಯ ಮೂಲಕ ಜನತೆಯ ಬದುಕಿಗೆ ಗ್ಯಾರಂಟಿ ಇಲ್ಲದಂತಹ ಸ್ಥಿತಿಯನ್ನುತಂದಿಟ್ಟಿದ್ದಾರೆ ಎಂದು ಹರಿಹಾಯ್ದ ಕ್ಯಾ ಬ್ರಿಜೇಶ್ ಚೌಟ ಅವರು ಭ್ರಷ್ಟಾಚಾರದ ಮೂಲಕ ಹಣವನ್ನು ಲೂಟಿ ಮಾಡಿದವರಿಗೆ ನಾವು ನಿಮ್ಮೊಂದಿಗೆ ಇದ್ದೆವೆ ಎಂದು ಕಾಂಗ್ರೆಸ್ ಹೈಕಮಾಂಡಿನಿಂದ ಹಿಡಿದು ಜಿಲ್ಲೆಯ ನಾಯಕರವರೆಗಿನವರು ಬೆನ್ನಿಗೆ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು.
ಸಂವಿಧಾನ ಮತ್ತು ಸಂವಿಧಾನಿಕ ಹುದ್ದೆಗೆ ಗೌರವ ಕೊಡದ ಕಾಂಗ್ರೇಸ್ ನಾಯಕರಿಂದತುಳುನಾಡಿನ ಜನತೆ ತಲೆ ತಗ್ಗಿಸುವಂತ ಕೆಲಸ ಸೋಮವಾರ ಆಗಿದೆ.ರಾಜ್ಯಪಾಲರನ್ನು ಬಾಂಗ್ಲಮಾದರಿ ಓಡಿಸುತ್ತೇವೆ ಎಂದು ಹೇಳಿಕೆ ನೀಡಿರುವ ಐವಾನ್ ಡಿಸೋಜಾ ತುಳುನಾಡಿಗೆ ಅವಮಾನಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಸ್ವಯಂಪ್ರರೀತ ಕೇಸು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದರು.
2025 ರ ಮಾರ್ಚ್ ಒಳಗೆ ಪೂರ್ಣ:
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಮಯಕ್ಕೆಸರಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಬದ್ದತೆಯಿಂದ ಕೆಲಸ ಮಾಡುವುದಾಗಿ ತಿಳಿಸಿದ ಸಂಸದರು ಕಾಮಗಾರಿಯಲ್ಲಿ ಉಂಟಾಗಿರುವ ಕೆಲ ತೊಡಕುಗಳನ್ನು ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಕಾಮಗಾರಿ 2025 ರ ಮಾರ್ಚ್ ಒಳಗೆ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ.ಪುಂಜಾಲಕಟ್ಟೆ – ಚಾರ್ಮಾಡಿ ವರೆಗಿನ ರಸ್ತೆ ಕಾಮಗಾರಿಯ ಗುತ್ತಿಗೆದಾರರನ್ನು ಬದಲಿಸುವ ಕಾರ್ಯ ಮಾಡಲಾಗಿದ್ದು,ಕಾಮಗಾರಿ ವೇಗ ದೊರಕಲಿದೆ ಎಂದರು.
ಸದಾ ಭದ್ರಕೋಟೆ:ಬೋಜೇಗೌಡ
ಸನ್ಮಾನ ಸ್ವೀಕರಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇ ಗೌಡರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇವರಾಜ್ ಅರಸುವಿನಂತಹ ಇಬ್ಬರು ದಾರ್ಶನಿಕರು ನಾಡಿನ ಸುಧಾರಕರ ಸ್ಥಾನದಲ್ಲಿ ನಿಂತವರು. ಶಿಕ್ಷಣ ಆರೋಗ್ಯ ಪ್ರತಿಯೊಬ್ಬರ ಹಕ್ಕು ಮತ್ತು ಸಂವಿಧಾನದ ಅಶಯವು ಆಗಿದೆ ಎಂದರು.
ಅವಿಭಜಿತ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠೆಯುಳ್ಳವರು ಹಾಗಾಗಿ ಸದಾ ಭದ್ರಕೋಟೆಯಾಗಿಯೇ ಉಳಿದಿದೆ ಎಂದು ಅವರು ತಿಳಿಸಿದರು.ಮೂಡಾ ಹಗರಣದಲ್ಲಿ ಸಿಲುಕಿದರೂ ನಾವು ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ,ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವವರು ತನ್ನ ಅಂತರಾಳಕ್ಕೆ ಬಗ್ಗಿ ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ವಿಶಾಲ ಮನೋಭಾವದೊಂದಿಗೆ ಚರ್ಚಿಸುವ ಮೂಲಕ ರಾಜ್ಯದ ಜನತೆಗೆ ಸಂದೇಶ ನೀಡಬಹುದಿತ್ತು.ಆದರೆ ಹಾಗೆ ಮಾಡಬೇಕಾದವರು ಪಲಾಯನಗೈದಿದ್ದಾರೆ ಎಂದು ಹೆಸರೇಳದೆ ಸಿ.ಎಂ.ಗೆ ಟಾಂಗ್ ನೀಡಿದರು.
ಸದಸ್ಯತ್ವ ಅಭಿಯಾನ:
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಹಕರಿಸುವ ಮೂಲಕ ಮುಂದಿನ ಜಿ.ಪಂ.,ತಾ.ಪಂ.ಚುನಾವಣೆಗೆ ಸಜ್ಜಾಗಬೇಕಾಗಿದೆ. ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸುವ ದೆಸೆಯಲ್ಲಿ ಸೆ.1 ರಿಂದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಲಿದ್ದು,ಬಂಟ್ವಾಳ ಮಂಡಲದಲ್ಲು ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸುವಲ್ಲಿ ಶ್ರಮಿಸುವಂತೆ ಕರೆ ನೀಡಿದರು.
ಬಂಟ್ವಾಳ ಮಂಡಲಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದಶೆಟ್ಟಿ ಪಕ್ಷ ಸಂಘಟನಾತ್ಮಕ ವಿಚಾರವಾಗಿ ಮಾಹಿತಿ ನೀಡಿದರು.
ಇನ್ನೋರ್ವಜಿಲ್ಲಾ ಪ್ರಧಾನ ಕಾರ್ಯದರ್ಶಿಯತೀಶ್ ಆಳ್ವ,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್‌ಮಲ್ಯ,ಜಿಲ್ಲಾಉಪಾಧ್ಯಕ್ಷರಾದ ಪೂಜಾ ಪೈ,ಪ್ರಸನ್ನ ಮಾಡ್ತ ಪುತ್ತೂರು,ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ,ಕೆ ಪದ್ಮನಾಭ ಕೊಟ್ಟಾರಿ, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು,ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ಜಗದೀಶ್ ಶೇಣವ,ಸಂದೇಶ್ ಶೆಟ್ಟಿ, ಜನಾರ್ದನ ಬೊಂಡಾಲ ಮೊದಲಾದವರು ಉಪಸ್ಥಿತರಿದ್ದರು.
ಪಕ್ಷದ ಯುವ ನಾಯಕ ವಿಕಾಸ್ ಪುತ್ತೂರು ಅವರು ಅಭಿನಂದನಾ ಭಾಷಣಗೈದರು.ಇದೇ ವೇಳೆ ಮಂಡಲಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಛಾದ ಪದಾಧಿಕಾರಿಗಳು, ಸದಸ್ಯರನ್ನು ಅಭಿನಂದಿಸಲಾಯಿತು.ಬ್ರಹ್ಮಶ್ರೀ ನಾರಾಯಣ ಗುರುಗಳ 170 ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲಾ ವಕ್ತಾರ ಡೊಂಬಯ ಅರಳ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ನೀಡಿದರು.
ಬಂಟ್ವಾಳಮಂಡಲದ ನೂತನ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಪದಾಧಿಕಾರಿಗಳ ಪಟ್ಟಿಯನ್ನು ವಾಚಿಸಿದರು.
ಇನ್ನೋರ್ವ ಪ್ರ.ಕಾರ್ಯದರ್ಶಿಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ವಂದಿಸಿದರು.ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.