ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು: ಶಿಕ್ಷಣಾಧಿಕಾರಿ ಮಂಜುನಾಥನ್
ಬಂಟ್ವಾಳ: ದೇಶದ ಭವಿಷ್ಯವು ಯುವಶಕ್ತಿಯ ಕೈಯಲ್ಲಿದೆ. ಯುವ ಮನಸ್ಸುಗಳಿಗೆ ಸರಿಯಾದ ದಾರಿ ಮತ್ತು ಮಾರ್ಗದರ್ಶನವನ್ನು ನೀಡಿದರೆ ಅವರೇ ಆಸ್ಥಿಯಾಗುತ್ತಾರೆ. ನಾರಾಯಗುರುಗಳ ಚಿಂತನೆ ಯುವಸಮುದಾಯಕ್ಕೆ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡುತ್ತದೆ. ಒಳ್ಳೆಯ ಮನುಷ್ಯರಾಗಿ ಬದುಕುವುದು ನಾರಾಯಣ ಗುರು ಚಿಂತನೆಯ ಆಶಯವಾಗಿದೆ ಎಂದುಬಂಟ್ವಾಳ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಅಭಿಪ್ರಾಯ ಪಟ್ಟಿದ್ದಾರೆ.
ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪುವಿನ ನಾರಾಯಣಗುರು ಸಭಾಭವನದಲ್ಲಿ ಬಂಟ್ವಾಳ ಶಿಕ್ಷಣ ಇಲಾಖೆ ಮತ್ತುಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ “ನಾರಾಯಣ ಗುರು ಚಿಂತನೆಯ ಕುರಿತ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆಗೆ ನಮ್ಮ ದೇಶದ ಸಂತರ, ರಾಷ್ಟ್ರೀಯ ಹೋರಾಟಗಾರರ ಚಿಂತನೆಯನ್ನು ಸರಿಯಾದ ರೀತಿಯಲ್ಲಿ ಮುಟ್ಟಿಸುವ ಕೆಲಸವು ಅಗತ್ಯವಾಗಿ ನಡೆಯಬೇಕು. ಜಾತಿ ಮತಗಳನ್ನು ಮೀರಿದ ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಅವರು ಹೇಳಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾರಾಯಣಗುರುಗಳು ಒಂದೇ ಜಾತಿಗೆ ಸೀಮಿತರಾದವರಲ್ಲ. ನಾರಾಯಣ ಗುರುಗಳ ಚಿಂತನೆ ಇಂದಿಗೂ ಪ್ರಸ್ತುತವಾದದ್ದು. ಯುವ ಜನತೆಗೆ ನಾರಾಯಣಗುರುಗಳ ಚಿಂತನೆಯನ್ನು ಮುಟ್ಟಿಸುವ ಕೆಲಸ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಮೋಹನ್ ಮಾಡೂರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸಂಘದ ಕಾರ್ಯದರ್ಶಿ ರಮೇಶ್ ಎಂ ತುಂಬೆ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕಂಜತ್ತೂರು ಉಪಸ್ಥಿತರಿದ್ದರು.
ದ್ವಿತೀಯ ಉಪಾಧ್ಯಕ್ಷ ನಾಗೇಶ್ ನೈಬೇಲು ಸ್ವಾಗತಿಸಿದರು. ಕಾರ್ಯದರ್ಶಿ ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು