ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವೀರ ರಾಣಿ ಆಬ್ಬಕ್ಕ – ಕಥಾ ಕೀರ್ತನ ಕಾರ್ಯಕ್ರಮ
ಬಂಟ್ವಾಳ: ಚರಿತ್ರೆಯೆಂದರೆ ಕೇವಲ ಮುಂಚೂಣಿಯಲ್ಲಿರುವ ರಾಜ ಮಹಾರಾಜರ ಅಥವಾ ಜನನಾಯಕರ ಹೋರಾಟ ಮತ್ತು ಸಾಧನೆಗಳ ಘಟನಾವಳಿ ಎಂದು ಬಿಂಬಿತವಾಗಿದೆ. ವಿಶ್ವದಾದ್ಯಂತ ಪ್ರಾದೇಶಿಕ ಮಟ್ಟದಲ್ಲಿ ನಡೆಸಿದ ಜನಸಾಮಾನ್ಯನ ಹೋರಾಟವಾಗಲಿ, ಸಾಧನೆಯಿರಲಿ ತೆರೆಮರೆಯಲ್ಲೇ ಉಳಿಯುವುದು ದುರಂತ ಎಂದು ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋಡಾ. ತುಕಾರಾಮ್ ಪೂಜಾರಿ ಹೇಳಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ ‘ರಾಣಿ ಅಬ್ಬಕ್ಕ’ ಕಥಾ ಕೀರ್ಥನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಲಾ ಸಾರಥಿ ತೋನ್ಸೆ ಪುಷ್ಕಳ್ ಕುಮಾರ್‌ರ ನೂತನ ಪರಿಕಲ್ಪನೆಯಲ್ಲಿ ಮೂಡಿ ಬಂದ ಕಥಾ ಕೀರ್ಥನೆ ರಾಣಿ ಅಬ್ಬಕ್ಕನ ವೀರಗಾಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಪೂರ್ಚುಗೀಸರ ದಾಹವನ್ನು ಪುಡಿಗಟ್ಟಿ ತುಳುನಾಡನ್ನು ರಕ್ಷಿಸಿದ ರಾಣಿ ಅಬ್ಬಕ್ಕನ ಸಾಹಸ-ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ್ವಾಳ ರೋಟರಿ ಕ್ಲಬ್ (ಟೌನ್) ಅಧ್ಯಕ್ಷರಾದ ಕಿಶೋರ್ ಕುಮಾರ್, ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಲಾಸಾರಥಿ ತೋನ್ಸೆ ಪುಷ್ಕಳ್ ಕುಮಾರ್ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಶ್ರೀಧರ್ ಭಟ್ ಮುಡಿಪು ಹಾರ್ಮೋನಿಯಮ್‌ನಲ್ಲಿ ಹಾಗೂ ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಿದರು.