ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಸಪ್ತಾಹಕ್ಕೆ ಚಾಲನೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಒಂದುವಾರಗಳ ಕಾಲ ನಡೆಯಲಿರುವ ಸಂಸ್ಕೃತ ಸಪ್ತಾಹಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಸ್ಥರಾದ ಡಾ. ಮಹಾಮೇಧಾನಂದಜಿ ಸ್ವಾಮಿಜಿಯವರು ಸಂಸ್ಕೃತ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಸ್ಕೃತ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಿದರು. ಒಂದು ವಾರದ ಕಾಲ ಶ್ರೀರಾಮ ಪದವಿ ಕಾಲೇಜಿನಲ್ಲಿ ಸಂಸ್ಕೃತ ಸಂಬಂಧಿ ವಿವಿಧ ಚಟುವಟಿಕೆಗಳು ನಡೆಯಲಿದೆ.

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ, ಮೈಸೂರು ಇವರು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿವೇಕ ಜಾಗೃತಿ ಅಭಿಯಾನ ಸರಣಿಯ “ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಯಪ್ರಜ್ಞೆ” ಎಂಬ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಪ್ರೇರಣಾ ಭವನದಲ್ಲಿ ನಡೆಯಿತು. ಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಡಾ. ಮಹಾಮೇಧಾನಂದಜಿ ಅವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿತ್ವದ ಮಹತ್ವವನ್ನು ಕೆಲವು ದೃಷ್ಟಾಂತಗಳ ಮೂಲಕ ತಿಳಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಚಂದ್ರು ಹೆಗಡೆ, ಕ್ಯಾ. ಗೋಪಿನಾಥ್ ಬೆಳ್ಳಾಲ, ಹೊಯ್ಸಳ ಪ್ರಾಂತದ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ಹಾಗೂ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮೇಧಾಸೂಕ್ತ ಪಠಿಸಿದರು. ವಿದ್ಯಾರ್ಥಿಗಳಾದ ಯತೀಶ್ ಆಚಾರ್ಯ ಸ್ವಾಗತಿಸಿ, ಕು. ಮನ್ವಿತಾ ವಂದಿಸಿ, ಕು. ದಿವ್ಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.