ಶಂಭೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ‘ಆಟಿ ತಿಂಗಳ ತಿಂಡಿ ತಿನಿಸು ಔಷಧಿಯುಕ್ತ’
ಬಂಟ್ವಾಳ: ಕೃಷಿ ಪ್ರಧಾನ ತುಳುನಾಡಿನಲ್ಲಿ ಆಟಿ ತಿಂಗಳು ಉಪಯೋಗಿಸುವ ಪ್ರಕೃತಿದತ್ತ ತಿಂಡಿ ತಿನಿಸುಗಳು ಔಷಧೀಯ ಗುಣ ಹೊಂದಿದೆ. ಈ ಪೌಷ್ಟಿಕಾಂಶ ಹೊಂದಿರುವ ವಿವಿಧ ಬಗೆಯ ತಿಂಡಿ-ತಿನಿಸುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ‘ಆಟಿದ ಕೂಟ’ ಕಾರ್ಯಕ್ರಮ ಶಾಲೆಯಲ್ಲಿ ನಡೆಸಲು ಸರ್ಕಾರವೂ ಪ್ರೋತ್ಸಾಹಿಸುತ್ತಿದೆ ಎಂದು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಹೇಳಿದರು.
ಇಲ್ಲಿನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ‘ಆಟಿದ ಕೂಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಮನೆಯಿಂದಲೇ ಅರಿವು ಮೂಡಿಸಬೇಕು ಎಂದರು.
ಸAಪನ್ಮೂಲ ವ್ಯಕ್ತಿಯಾಗಿ ಶಂಭೂರು ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಜಿನ್ನಪ್ಪ ಕುಂದಯಗೋಳಿ ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯ ಯೋಗೀಶ ಶಾಂತಿಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಕೋಟ್ಯಾನ್, ಉದ್ಯಮಿ ಹೇಮಂತ್ ಪೂಜಾರಿ ಶುಭ ಹಾರೈಸಿದರು.
ಮುಖ್ಯಶಿಕ್ಷಕ ಜಯರಾಮ ಪಡ್ರೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಹಿಮಾಶ್ರಿ ಸ್ವಾಗತಿಸಿ, ದಿಶಾ ಎನ್. ವಂದಿಸಿದರು. ಮಾನ್ವಿ, ಅನ್ವಿತ ಮತ್ತು ಪ್ರೇಕ್ಷ ಕಾರ್ಯಕ್ರಮ ನಿರೂಪಿಸಿದರು.