ಸಕಲೇಶಪುರ ಗುಡ್ಡಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ
ರಾಜ್ಯದ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಇದೀಗ ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಾಸನ-ಮಂಗಳೂರು ನಡುವಿನ ಸಂಖ್ಯೆ 42/43ರ ರೈಲ್ವೆ ಮಾರ್ಗದ ಮಧ್ಯೆ ಭೂ ಕುಸಿತವಾಗಿದ್ದು, ಇದೀಗ ಸಂಪೂರ್ಣ ರೈಲು ಸಂಚಾರ ಸ್ಥಗಿತಗೊಂಡಿದೆ. ಈಗಾಗಲೇ ರೈಲ್ವೆ ಕಾರ್ಮಿಕ ವಿಭಾಗದ ಸಿಬ್ಬಂದಿ ಹಳಿಯ ಮೇಲೆ ಬಿದ್ದಿರುವ ಮಣ್ಣುಗಳನ್ನು ತೆರವು ಮಾಡುತ್ತಿದ್ದಾರೆ.
ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖೆ ತಿಳಿಸಿದೆ. ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ಸ್ಥಗಿತಗೊಂಡಿದ್ದು. ಸದ್ಯ ಪ್ರಯಾಣಿಕರು ಪರದಾಡುವಂತಾಗಿದೆ.
ಬೆಳಗಿನ ಜಾವದ ವರೆಗೆ ಪ್ರಯಾಣಿಕರು ಕಾದು ನಿಂತಿದ್ದರು. ಇದೀಗ ಅವರಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. ಇನ್ನು ಹೆಚ್ಚಿನ ಪ್ರಯಾಣಿಕರು ರೈಲು ಇಟ್ಟು ಬಸ್ಸಿನತ್ತ ಮುಖ ಮಾಡಿದ್ದಾರೆ. ಬಸ್ ಮೂಲಕ ತಮ್ಮ ಊರುಗಳಿಗೆ ಪ್ರಯಾಣ ಬೆಳಸಿದ್ದಾರೆ. ಇನ್ನು ಈ ಹಿಂದೆಯೂ ಗುಡ್ಡ ಕುಸಿತದಿಂದ ಈ ಭಾಗದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಂಡಿತು.