ಕುಂದಾಪುರ: ಕಾಳಿಂಗ ಸರ್ಪವನ್ನೇ ನುಂಗಲು ಹೋಗಿ ಪಜೀತಿಗೆ ಸಿಲುಕಿದ ಹೆಬ್ಬಾವು
ಹಾವುಗಳು ಕೋಳಿ, ಇತರೆ ಸಣ್ಣಪುಟ್ಟ ಪ್ರಾಣಿಗಳನ್ನು ನುಂಗಿ ಹಾಕುವುದನ್ನು ಕೇಳಿರುತ್ತೀರಿ ಅಲ್ವಾ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ದೈತ್ಯ ಗಾತ್ರದ ಹೆಬ್ಬಾವೊಂದು ನುಂಗಲು ಹೋಗಿ ಪಜೀತಿಗೆ ಸಿಲುಕಿದೆ. ನಂತರ ಸ್ನೇಕ್ ಶಂಕರ್ ಅವರು ಸ್ಥಳಕ್ಕೆ ಧಾವಿಸಿ ಎರಡೂ ಹಾವುಗಳನ್ನು ರಕ್ಷಿಸಿ ಜೋಪಾನವಾಗಿ ಕಾಡಿಗೆ ಬಿಟ್ಟಿದ್ದಾರೆ.
ಈ ಘಟನೆ ಕುಂದಾಪುರದ ಜಡ್ಕಲ್ ಗ್ರಾಮದ ಹಳನೀರು ಎಂಬಲ್ಲಿ ಬುಧವಾರ (ಆ.07) ನಡೆದಿದ್ದು, ಹೆಬ್ಬಾವೊಂದು ಕಾಳಿಂಗ ಸರ್ಪವನ್ನು ನುಂಗಲು ಪ್ರಯತ್ನಿಸಿದೆ. ಆದರೆ ನಂತರದಲ್ಲಿ ಹಾವನ್ನು ನುಂಗಲು ಆಗದೆ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಅಂಪಾರಿನ ಸ್ನೇಕ್ ಶಂಕರ್ ಅವರು ಎರಡೂ ಹಾವುಗಳನ್ನು ಬೇರ್ಪಡಿಸಿ, ಸ್ಥಳೀಯರ ಸಹಕಾರದೊಂದಿದೆ ಎರಡೂ ಹಾವುಗಳನ್ನು ಆನೆಝರಿ ಕಡೆಗೆ ಕೊಂಡೊಯ್ದು ಬಿಟ್ಟಿದ್ದಾರೆ.
ಹಳನೀರಿನ ಮುತ್ತಮ್ಮ ಶೆಡ್ತಿ ಅವರ ಮನೆಯ ಹತ್ತಿರದ ಗದ್ದೆಯಲ್ಲಿ ಹೆಬ್ಬಾವು ಕಾಳಿಂಗ ಸರ್ಪದ ತಲೆಯನ್ನು ನುಂಗಿತ್ತು. ಬಳಿಕ ಕಾಳಿಂಗ ಸರ್ಪವನ್ನು ಸಂಪೂರ್ಣವಾಗಿ ನುಂಗಲು ಆಗದೆ ಸರ್ಪವನ್ನು ಸುತ್ತು ಹಾಕಲು ಪ್ರಯತ್ನಿಸುತ್ತಿತ್ತು. ಹೆಬ್ಬಾವಿನನ ಬಾಲವನ್ನು ಕಾಳಿಂಗ ಸರ್ಪವೂ ಸುತ್ತು ಹಾಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ನೇಕ್ ಶಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಂಕರ್ ಹಾವುಗಳನ್ನು ರಕ್ಷಿಸಿದ್ದಾರೆ.