ಬಂಟ್ವಾಳ: ಎಚ್ಚರ… ಎಚ್ಚರಾ… ರಸ್ತೆ ಬದಿ ಕಸ ಎಸೆದರೆ ಬೀಳುತ್ತೆ ಭಾರಿ ಮೊತ್ತದ ದಂಡ

ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ರಸ್ತೆಗಳ ಇಕ್ಕೆಲಗಳಲ್ಲಿ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಹೊಸ ಯೋಜನೆಯನ್ನು ರೂಪಿಸಿದೆ. ಹೌದು ರಸ್ತೆ ಬದಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಇದರ ಸಹಾಯದಿಂದ ರಸ್ತೆ ಬದಿ ಎಸೆದು ಹೋದ ವಾಹನ ಸವಾರರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.
ಈಗಾಗಲೇ ಐದು ವಾಹನಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಇಪ್ಪತ್ತೈದು ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಇಲ್ಲಿನ ಗ್ರಾಮ ಪಂಚಾಯತ್ ಪಿ.ಡಿ.ಒ ಲಕ್ಷ್ಮಣ್ ತಿಳಿಸಿದ್ದಾರೆ. ಸಜೀಪ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲು ಗುಳಿಗನ ಕಟ್ಟೆ ಸಮೀಪ ಹಾಗೂ ಪಾಣೆಮಂಗಳೂರು ಶಾರದ ಶಾಲೆಯ ಅಂಗಳದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಸ ಎಸೆಯುವುದು ಮಾಮೂಲಿಯಾಗಿತ್ತು. ಈ ಬಗ್ಗೆ ನಾಮ ಫಲಕ ಅಳವಡಿಸಿ ಎಚ್ಚರಿಕೆ ನೀಡಿದರೂ ಕ್ಯಾರೆ ಅನ್ನದೆ ಜನ ಕಸ ಎಸೆದು ಹೋಗುತ್ತಿದ್ದರು. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯತ್ ರಸ್ತೆ ಬದಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ನಿರ್ಧಾರಕ್ಕೆ ಬಂದಿತು.
ಹೀಗೆ ಕಸದ ರಾಶಿ ಬಿದ್ದಿರುವ ಕಡೆಗಳಲ್ಲಿ ಪಂಚಾಯತ್ ವತಿಯಿಂದ ಉತ್ತಮ ಗುಣಮಟ್ಟದ ಸಿಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಸ ಎಸೆದು ಹೋಗುವ ವಾಹನ ಸವಾರರ ವಾಹನ ನೊಂದಣಿ ಸಂಖ್ಯೆಯ ಮೂಲಕ ಮನೆ ವಿಳಾಸ ಪಡೆದು ನೋಟಿಸ್ ನೀಡಿ ಪಂಚಾಯತ್ ದಂಡ ವಿಧಿಸಿದೆ. ಪಂಚಾಯತಿಯ ಈ ಒಂದು ನಿರ್ಧಾರವನ್ನು ಸಾರ್ವಜನಿಕರು ಕೂಡಾ ಸ್ವಾಗತಿಸಿದ್ದಾರೆ.