ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಸದಂತೆ ಕ್ರಮಕ್ಕೆ ಆಗ್ರಹಿಸಿ ಮನವಿ
ಬಂಟ್ಚಾಳ: ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ.ಆ. ೧೫ ಮತ್ತು ಜ. ೨೬ ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಗುತ್ತದೆ.ಆದರೆ ಅದೇ ದಿನ ಕಾಗದ,ಪ್ಲಾಸ್ಟಿಕ್ ರಾಷ್ಟ್ರಧ್ವಜಗಳು ರಸ್ತೆ, ಕಸದರಾಶಿ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ.

ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು ಸಹಿತ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುವಾರ ತಹಶೀಲ್ದಾರ್ ರವರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹಾಗೆಯೇ ರಾಜ್ಯ ಸರಕಾರ ರಾಮನಗರದ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಖಂಡಿಸಿರುವ ಸಮಿತಿ ತನ್ನದೇ ಆದ ಇತಿಹಾಸ ಹೊಂದಿರುವ ರಾಮನಗರದ ಹೆಸರನ್ನು ಬದಲಾಯಿಸುವ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರಾಜಸ್ಥಾನದಿಂದ ಬೆಂಗಳೂರಿಗೆ ಅಕ್ರಮವಾಗಿ ಮಾಂಸ ಸರಬರಾಜು ದಂಧೆಯನ್ನು ಪತ್ತೆಹಚ್ಚಿದ ರಾಷ್ಟ್ರ ರಕ್ಷಣೆ ಪಡೆಯ ಅಧ್ಯಕ್ಷರಾದ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಎಸ್. ಪಿ. ಚಂದನ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಂಟ್ವಾಳ ತಹಶೀಲ್ದಾರರಾದ ಡಿ.ಅರ್ಚನಾ ಭಟ್ ರವರು ಮನವಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸಜಿಪಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್, ಯಶೋಧರ್ ಬಂಟ್ವಾಳ, ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಸೋಮನಾಥ್ ಸಾಲಿಯನ್, ನಾರಾಯಣ ಅಮೀನ್, ಹರಿ ರಾಮ್, ಜಯಕುಮಾರ್ ಸಜೀಪ, ಕಿರಣ್ ಮೇಲ್ಕಾರ್, ಜನಾರ್ದನ, ಯೋಗೇಶ್ ಬಿ.ಸಿ ರೋಡು ಮತ್ತಿತರರು ಉಪಸ್ಥಿತರಿದ್ದರು.