ಮಂಗಳೂರು: ಮಳೆ, ಗಾಳಿಯಿಂದ ಧರೆಗುರುಳಿದ ವಿದ್ಯುತ್ ಕಂಬಗಳು, ಮೆಸ್ಕಾಂಗೆ 33.40 ಕೋಟಿ ರೂ. ನಷ್ಟ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿದ ಪರಿಣಾಮ ಜಿಲ್ಲೆಯ ಮೆಸ್ಕಾಂ ಸಿಬ್ಬಂದಿ ಸೇವಾ ವಲಯದ ವ್ಯಾಪ್ತಿಯಲ್ಲಿ 21702 ವಿದ್ಯುತ್ ಸರಬರಾಜು ಕಂಬಗಳು ಧರೆಗುರುಳಿವೆ. ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಮತ್ತು ಕೇಬಲ್ ಹಾನಿಯಾಗಿದೆ. ಒಟ್ಟಾರೆ ಅಂದಾಜು 33.40 ಕೋಟಿ ರೂ. ನಷ್ಟವಾಗಿದೆ.
ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದು, ದಕ್ಷಿಣ ಕನ್ನಡದಲ್ಲಿ 10.14 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಚಿಕ್ಕಮಗಳೂರಿನಲ್ಲಿ 9.67 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳು ನಾಶವಾಗಿವೆ. ಉಡುಪಿ ಮತ್ತು ಶಿವಮೊಗ್ಗದಲ್ಲಿ 8.48 ಕೋಟಿ ಹಾಗೂ 5.09 ಕೋಟಿ ರೂ. ಹಾನಿಗೊಳಗಾದ ಬಹುತೇಕ ಉಪಕರಣಗಳನ್ನು ಮೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ 6369 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಚಿಕ್ಕಮಗಳೂರಿನಲ್ಲಿ 5697, ಶಿವಮೊಗ್ಗದಲ್ಲಿ 4960 ಮತ್ತು ಉಡುಪಿಯಲ್ಲಿ 4776 ವಿದ್ಯುತ್ ಕಂಬಗಳು ಧರೆಗುರುಳಿವೆ. ನೆಲಕ್ಕುರುಳಿರುವ 21702 ವಿದ್ಯುತ್ ಕಂಬಗಳ ಪೈಕಿ 21245 ಈಗಾಗಲೇ ಹೊಸ ಕಂಬಗಳನ್ನು ಅಳವಡಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 316 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಇದೀಗ ಎಲ್ಲವನ್ನು ಸರಿ ಮಾಡಲಾಗಿದೆ.
ಮಳೆ, ಗಾಳಿಯ ನಡುವೆಯೂ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಗ್ರಾಹಕರು ಮೆಸ್ಕಾಂ ಸಿಬ್ಬಂದಿಗೆ ಸಹಕರಿಸಲು ಕೋರಲಾಗಿದೆ.