ಉಡುಪಿ: ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿ, ಚಿಕಿತ್ಸೆ ನೀಡಲು ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದ ಬಸ್ ಚಾಲಕ
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸಿನಲ್ಲಿ ಅಸ್ವಸ್ಥಗೊಂಡ ಕಾಲೇಜು ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲು ಪ್ರಯಾಣಿಕರಿಂದ ಬಸ್ಸನ್ನೇ ಆಸ್ಪತ್ರೆಯೊಳಗೆ ಕೊಂಡೊಯ್ದು ವಿದ್ಯಾರ್ಥಿಯ ಜೀವ ಉಳಿಸಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು.
ಅದೇ ರೀತಿಯ ಘಟನೆಯೂ ಇಂದು ಉಡುಪಿಯಲ್ಲಿ ನಡೆದಿದೆ.ಹೌದು, ಶಿರ್ವ ಮಂಚಕಲ್ ಮಾರ್ಗವಾಗಿ ಉಡುಪಿಗೆ ಹೋಗುತ್ತಿದ್ದ ನವೀನ್ ಬಸ್ ಉಡುಪಿಯ ಹಳೆ ತಾಲೂಕು ಕಚೇರಿ ತಲುಪಿದ್ದಂತೆ ಬಸ್ಸಿನಲ್ಲಿದ್ದ ಯುವತಿಯೊಬ್ಬರು ಅಸ್ವಸ್ಥರಾಗಿದ್ದಾರೆ. ಯುವತಿಯೂ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಗ ಬಸ್ ಚಾಲಕ ಹಾಗೂ ನಿರ್ವಾಹಕ ಹಿಂದೆ ಮುಂದೆ ನೋಡಲಿಲ್ಲ.
ಆ ತಕ್ಷಣವೇ ಬಸ್ಸನ್ನು ನೇರವಾಗಿ ಸಮೀಪದಲ್ಲೇ ಇದ್ದಂತಹ ಡಾ.ಟಿ.ಎಂ.ಎ ಪೈ ಆವರಣದೊಳಕ್ಕೆ ಚಾಲಕನು ಕೊಂಡೊಯ್ದಿದ್ದಾರೆ. ನವೀನ್ ಬಸ್ಸಿನ ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ಯುವತಿಯ ಮನೆಯವರಿಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿಯ ಮನೆಯವರು ಬರುವ ತನಕ ಅಲ್ಲೇ ಇದ್ದು ಚಿಕಿತ್ಸೆಗೆ ಸಹಕಾರ ನೀಡಿದ್ದು, ಬಸ್ ಸಿಬ್ಬಂದಿಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ.