ಮಳೆಗಾಲ ಆರಂಭವಾಯಿತೆಂದರೆ ಕರಾವಳಿ ಕೆಲವು ಪ್ರದೇಶದ ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕಬೇಕಾಗುತ್ತದೆ. ಇಲ್ಲೊಬ್ಬ ಮಹಿಳೆಯದ್ದೇ ಇಂತಹದ್ದೇ ಪರಿಸ್ಥಿತಿ. ಮನೆಗೆ ತಲುಪಲು ಸರಿಯಾದ ದಾರಿಯಿಲ್ಲದೇ, ಗುಡ್ಡ ಕುಸಿತದಿಂದಲೇ ತತ್ತರಿಸಿ ಹೋಗಿದ್ದಾರೆ. ಹೌದು, ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ದುರ್ಗಕೊಡಿಯ ನಿವಾಸಿ ಸುಂದರಿಯವರು ಈ ಬಾರಿಯೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡವು ಕುಸಿದಿದೆ.

ಕಳೆದ ವರ್ಷವು ಸುಂದರಿಯವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮನೆಗೆ ಹಾನಿಯಾಗಿತ್ತು. ಆದರೆ ಇದೇ ಬುಧವಾರ ರಾತ್ರಿ ಮನೆ ಮೇಲೆ ಗುಡ್ಡವು ಕುಸಿದಿದ್ದು, ಯಾವುದೇ ಕ್ಷಣದಲ್ಲಿಯೂ ಮನೆಯೂ ಸಂಪೂರ್ಣವಾಗಿ ಬೀಳುವ ಸಾಧ್ಯತೆಯಿದೆ. ಆದರೆ ಮತ್ತೆ ಶುಕ್ರವಾರ ಮುಂಜಾನೆಯ ವೇಳೆ ಇಡೀ ಗುಡ್ಡ ಮನೆಯ ಮೇಲೆ ಬಿದ್ದು, ಗೋಡೆಗಳು ಬಿರುಕು ಬಿಟ್ಟ ಪರಿಣಾಮವಾಗಿ ಮನೆಯ ಗೋಡೆ ಬೀಳಲು ಆರಂಭಿಸಿದೆ.

ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ವಾಸವಿರುವ ಸುಂದರಿಯವರಿಗೆ ಮೊದಲು ಈ ಸಮಸ್ಯೆಯೆ ಇರಲಿಲ್ಲ. ಆದರೆ ಕಳೆದ ವರ್ಷ ಸುಂದರಿಯವರ ಮನೆಯ ಹಿಂಭಾಗದ ಜಾಗವನ್ನು ಖರೀದಿಸಿದ್ದರು. ಇಲ್ಲಿನ ಪ್ರದೇಶವನ್ನು ಸಮತಟ್ಟುಗೊಳಿಸಿದ್ದು, ನೈಸರ್ಗಿಕವಾಗಿ ಮಳೆ ನೀರು ಹರಿದು ಹೋಗುತ್ತಿದ ತೊಡನ್ನು ಮುಚ್ಚಿದ ಪರಿಣಾಮವೇ ಈ ಸಮಸ್ಯೆ ಉಂಟಾಗಲು ಕಾರಣವಾಗುತ್ತಿದೆ ಎನ್ನುವುದು ಸುಂದರಿಯವರ ಆರೋಪವಾಗಿದೆ.

ಇತ್ತ ಮುತ್ತೂರು ಗ್ರಾಮ ಪಂಚಾಯತ್ ಹಲವಾರು ಬಾರಿ ತೊಡನ್ನು ತೆರವುಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಜಾಗದ ಮಾಲೀಕರಿಗೆ ತಿಳಿಸಿದರೂ ಕೂಡ ಪಂಚಾಯತ್ ಮಾತನ್ನು ತಲೆಗೆ ಹಾಕಿಕೊಳ್ಳಲಿಲ್ಲ ಎನ್ನುವ ಮಾತು ಪಂಚಾಯತ್ ಆಡಳಿತ ಮಂಡಳಿಯದ್ದು. ಇತ್ತ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಮನೆಯಿಂದ ಬೇರೆಡೆಗೆ ತೆರಳಲು ಸುಂದರಿಯವರ ಕುಟುಂಬ ಒಪ್ಪುತ್ತಿಲ್ಲ.

ಈ ಹಿನ್ನಲೆಯಲ್ಲಿ ಮುತ್ತೂರು ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ,ಉಪಾಧ್ಯಕ್ಷೆ ಸುಷ್ಮಾ ಸದಸ್ಯರುಗಳಾದ ಜಗದೀಶ್ ದುರ್ಗಾಕೊಡಿ, ಮಾಲತಿ, ಥೋಮಸ್ ಹೆರಾಲ್ಡ್ ರೋಜಾರಿಯೋ, ತಾರಾನಾಥ ಕುಲಾಲ್, ಶಶಿಕಲಾ, ರುಕ್ಮಿಣಿ, ಪಿಡಿಓ ಪ್ರಮೋದ್ ನಾಯ್ಕ್, ಗ್ರಾಮಕರಣಿಕ ಮುತ್ತಪ್ಪ ಬಡಿಗೇರ್, ಸಿಬ್ಬಂದಿ ಲಕ್ಷ್ಮಣ ಮತ್ತು ರಜನಿ ಸುಂದರಿಯವರ ಮನೆಗೆ ತೆರಳಿದ್ದು, ಸುಂದರಿಯವರಿಗೆ ಬೇರೆಡೆಗೆ ತೆರಳಲು ಮನವಿ ಮಾಡಿದ್ದಾರೆ.

ಆದರೆ ಕುಟುಂಬವು ಒಪ್ಪದೇ ಇರುವ ಕಾರಣ ಮಧ್ಯಾಹ್ನ ಮಂಗಳೂರು ತಾಲೂಕು ಸಹಾಯಕ ಆಯುಕ್ತ ಹರ್ಷವರ್ಧನ್ ಮತ್ತು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಪಿಡಿಓ ಹಾಗೂ ಗ್ರಾಮಕರಣಿಕರ ಜೊತೆ ಸುಂದರಿ ಅವರ ಮನೆಗೆ ಭೇಟಿ ನೀಡಲು ಮುಂದಾಗಿದ್ದಾರೆ. ಆದರೆ ಮನೆಗೆ ಹೋಗುವ ದಾರಿಯು ಸರಿಯಿಲ್ಲದ ಕಾರಣ, ಮುಖ್ಯ ರಸ್ತೆಯಲ್ಲಿಯೇ ನಿಂತು ಸುಂದರಿ ಅವರ ಕುಟುಂಬದ ಜೊತೆಗೆ ಮಾತನಾಡಿ ಸಮಸ್ಯೆಯನ್ನು ಆಲಿಸಿದ್ದಾರೆ.

ಅದಲ್ಲದೇ ಸಹಾಯಕ ಆಯುಕ್ತ ಹರ್ಷವರ್ಧನ್ ಅವರು ಸುಂದರಿಯ ಕುಟುಂಬವನ್ನು 2 ತಿಂಗಳ ಮಟ್ಟಿಗೆ ಬಾಡಿಗೆ ಮನೆಯಲ್ಲಿ ಇರುವಂತೆ ಸೂಚಿಸಿ, ಸೂಕ್ತ ವ್ಯವಸ್ಥೆ ಮಾಡುವಂತೆ ಪಂಚಾಯತ್ ಮತ್ತು ಕಂದಾಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ ಸುಂದರಿಯವರ ಮನೆಯ ಹಿಂಭಾಗದಲ್ಲಿರುವ ಮನೆಯ ಮಾಲೀಕನಿಗೂ ಈ ಪಂಚಾಯತ್ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಶುಕ್ರವಾರವೇ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *