ಪ್ರವಾಹದಿಂದ ಬಂಟ್ವಾಳ ತತ್ತರಿಸಿದೆ, ಉಸ್ತುವಾರಿ ಮಂತ್ರಿಯ ಸುಳಿವಿಲ್ಲ: ಆರ್. ಅಶೋಕ್

ಜುಲೈ 30ರಂದು ಸುರಿದ ಭಾರೀ ಮಳೆಯಿಂದ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಇದರಿಂದ ಜನರ ಆತಂಕಗೊಂಡಿದರು. ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಪಾಣೆಮಂಗಳೂರು, ಶಂಭೂರು, ನಂದಾವರ ಸೇರಿದಂತೆ ಬಂಟ್ವಾಳ ತಾಲೂಕಿನ ಅನೇಕ ನಗರಗಳು ಹಾಗೂ ಗ್ರಾಮಗಳು ಪ್ರವಾಹಕ್ಕೆ ತತ್ತರಿಸಿತ್ತು. ಮಳೆಯಿಂದ ಆತಂಕಗೊಂಡಿದ್ದ ಕುಟುಂಬಗಳ ರಕ್ಷಣೆಗೆ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಲಾಗಿತ್ತು. ಶಾಸಕ ರಾಜೇಶ್ ನಾಯ್ಕ್ ಕೂಡ ಧಾವಿಸಿದ್ದರು. ಇದೀಗ ಮಂಗಳೂರಿಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಳುಗಡೆ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಬಂಟ್ವಾಳ ಬಡ್ಡಕಟ್ಟೆ, ನಾವೂರ ಹಾಗೂ ಜಕ್ರಿಬೆಟ್ಟು ಡ್ಯಾಂಗೆ ಭೇಟಿ ನೀಡಿ ಆರ್. ಅಶೋಕ್ ಪರಿಶೀಲನೆ ನಡೆಸಿದರು. ಭೇಟಿ ವೇಳೆ ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು. ನದಿ ತೀರದಲ್ಲಿ ಮುಳುಗಡೆಯಾಗಿರುವ ಪ್ರದೇಶಗಳಿಗೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್, ಎಂ.ಎಲ್.ಸಿ.ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಬಿಜೆಪಿ ಪ್ರಮುಖರಾದ ಪೂಜಾ ಪೈ,ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ, ಅಕ್ಷಿತ್ ಸುವರ್ಣ, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಆರ್.ಸಿ.ನಾರಾಯಣ, ರಾಮ್ ದಾಸ ಬಂಟ್ವಾಳ, ದೇವದಾಸ ಬಂಟ್ವಾಳ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಆನಂದ ಶಂಭೂರು, ಪುಷ್ಪರಾಜ ಚೌಟ, ರಶ್ಮಿತ್ ಶೆಟ್ಟಿ, ಸಂತೋಷ್ ರಾಯಿಬೆಟ್ಟು, ಕಾರ್ತಿಕ್ ಬಲ್ಲಾಳ್, ಯಶವಂತ ನಗ್ರಿ,ಯಶೋಧರ ಕರ್ಬೆಟ್ಟು, ಪ್ರಕಾಶ್ ಅಂಚನ್ ,ಸಂಜೀವ ಪೂಜಾರಿ,ಸುರೇಶ್ ಕುಲಾಲ್, ಹರೀಶ್ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬರದೇ 15 ದಿನ ಮೇಲಾಗಿದೆ: ಅಶೋಕ್
ರಾಜ್ಯದಲ್ಲಿ ಆಗಿರೋ ಮಳೆಹಾನಿ ವೀಕ್ಷಣೆಗೆ ಬಂದಿದ್ದೇನೆ. ಮಳೆ ರಾಜ್ಯದಲ್ಲಿ ದೊಡ್ಡ ರೀತಿಯ ಹಾನಿ ಮಾಡಿದೆ. ಸಾವಿನ ಜೊತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿ ಆಗಿದ್ದು, ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನವನ್ನು ನೀಡಿದ್ದೇವೆ. ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ಗಂಜಿಕೇಂದ್ರ ತೆರೀತಾ ಇದ್ದರು. ನಾನು ಅದನ್ನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ನೀಡಿದ್ದೇವೆ. ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ. ಇನ್ನು ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬರದೇ 15 ದಿನ ಮೇಲಾಗಿದೆ. ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದ್ಯಂತೆ. ಆದರೆ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.