ಬಂಟ್ವಾಳ: ಪ್ರವಾಹದಿಂದ ತತ್ತರಿಸಿದ ಕುಟುಂಬಗಳ ಸಹಾಯಕ್ಕೆ ಧಾವಿಸಿದ ಶಾಸಕ ರಾಜೇಶ್ ನಾಯ್ಕ್

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಅನೇಕ ಅಂಗಡಿಗಳು ಮುಳುಗಡೆಯಾಗಿದ್ದು, ಬಂಟ್ವಾಳದ ಬಿ ಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲಾ ಜಲಾವೃತಗೊಂಡಿದೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಇದರ ಜತೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ
ರಾಜೇಶ್ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ನದಿ ತೀರದಲ್ಲಿ ವಾಸಿಸುತ್ತಿರುವ ಸಾಕಷ್ಟು ಮನೆಗಳು ಮುಳುಗಡೆಯಾಗಿದೆ. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿದ್ದು,ಸ್ಥಳೀಯರ ಜತೆಗೆ ಶಾಸಕರು ಕೂಡ ರಕ್ಷಣೆ ಕಾರ್ಯದಲ್ಲಿ ತೋಡಗಿಕೊಂಡಿದ್ದಾರೆ. ಬಂಟ್ವಾಳದ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳ ಕೃಷಿ ತೋಟಗಳು, ಗದ್ದೆಗಳಿಗೂ ಪ್ರವಾಹಕ್ಕೆ ತತ್ತರಿಸಿದೆ.
ಇನ್ನು ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ.ಸಿ.ರೋಡಿನ ಬಸ್ತಿಪಡ್ಪು, ಆಲಡ್ಕ ಮೊದಲಾದ ಪ್ರದೇಶಗಳ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ಸಂಪರ್ಕ ಕಡಿತಗೊಂಡಿದೆ.

ಅಪಾಯದಲ್ಲಿರುವ ಕುಟುಂಬದ ಸ್ಥಳಾಂತರಕ್ಕೆ ಸೂಚನೆ : ಶಾಸಕ ರಾಜೇಶ್ ನಾಯ್ಕ್
ಕಳೆದ ಕೆಲವು ದಿನಗಳಿಂದ ಅತಿಯಾಗಿ ಮಳೆಯಾಗುತ್ತಿದ್ದು,ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ಹೀಗಾಗಿ ಅಪಾಯದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸುರಕ್ಷಿತವಲ್ಲದ ಮತ್ತು ನೀರು ನುಗ್ಗಿ ಅಪಾಯವಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ತಾಲೂಕು ಆಡಳಿತದ ಮೂಲಕ ಮಾಡಲು ತಿಳಿಸಿದ್ದೇನೆ.
ಇನ್ನು ಮಳೆ ನೀರಿನ ಜತೆಗೆ ಕೆಸರು ಕೂಡ ಮನೆಯೊಳಗೆ ಬಂದಿರುತ್ತದೆ. ಮಳೆ ಕಡಿಮೆಯಾದ ನಂತರ ಆ ಮನೆಗಳನ್ನು ಸ್ವಚ್ಛತೆಯನ್ನು ಕೂಡ ಮಾಡುವ ವ್ಯವಸ್ಥೆಯನ್ನು ಮಾಡುವಂತೆ ತಹಶಿಲ್ದಾರ್ ಅವರಿಗೆ ಹೇಳಿದ್ದೇನೆ ಎಂದರು.

ಇನ್ನು ಶಾಸಕರ ಜತೆಗೆ ತಹಶಿಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಾಂತರ ಎಸ್.ಐ.ಹರೀಶ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಎ.ಗೋವಿಂದ ಪ್ರಭು, ನಂದರಾಮ ರೈ,ಗಣೇಶ್ ರೈ ಮಾಣಿ, ಜನಾರ್ಧನ, ಸದಾನಂದ ನಾವೂರ, ಧನಂಜಯ ಶೆಟ್ಟಿ ಸರಪಾಡಿ,ಆಶೋಕ್ ಶೆಟ್ಟಿ ಸರಪಾಡಿ, ದೇಜಪ್ಪ ಬಾಚಕೆರೆ, ಶಾಂತಪ್ಪ ಪೂಜಾರಿ ಹಟ್ಟದಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರ ಗುತ್ತು, ಆನಂದ ಶೆಟ್ಟಿ ಬಾಚಕೆರೆ ಮತ್ತಿತರ ಬಂದಿದ್ದರು.