ಸರಕಾರಿ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡೆಯಿರಿ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ:ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡು ಪ್ರತಿಯೊಬ್ಬರು ಅದರ ಸದುಪಯೋಗ ಪಡೆಯಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದ್ದಾರೆ.

ಭಾನುವಾರ ಬಿ.ಸಿ.ರೋಡಿನ ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ ಇದರ ನೇತೃತ್ವದಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಸವಲತ್ತುಗಳ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ತನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಹಲವಾರ ಚರ್ಚ್ ಗಳ ಅಭಿವೃದ್ಧಿಗೆ ಅನುದಾನವನ್ನು ಒದಗಿಸಿದ್ದೇನೆ, ಈ ಬಾರಿಯ ಬಜೆಟ್ ನಲ್ಲಿಯು ಸರಕಾರ ಅನುದಾನವನ್ನು ಘೋಷಣೆ ಮಾಡಿದೆ,ವಿವಿಧ ಅಭಿವೃದ್ದಿಯ ದೃಷ್ಟಿಯಿಂದ ಅದರ ಬಳಕೆ ಮಾಡಿಕೊಳ್ಳುವಂತೆ ಶಾಸಕರು ತಿಳಿಸಿದರು.

ಕಾರ್ಯಕ್ರಮವನ್ನು ಮೊಡಂಕಾಪು ಚಚ್೯ನ ಧರ್ಮಗುರು ಫಾ.ವಲೇರಿಯನ್ ಡಿ.ಸೋಜ ಅವರು ಉದ್ಘಾಟಿಸಿ ಮಾತನಾಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಹೊಂದಾಣಿಕೆಯಿಂದ ಸರಕಾರದ ಕೆಲಸ ದೇವರ ಕೆಲಸ ಎಂಬ ಭಾವನೆಯಿಂದ ಮಾಡಿದಾಗ ಸರಕಾರದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ.ಸೋಜ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಎಲ್ ಸಿ ಐವಾನ್ ಡಿ.ಸೋಜ ಅವರು,
ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಕ್ರಿಶ್ಚಿಯನ್ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರಲ್ಲದೆ ಕ್ರಿಶ್ಚಿಯನ್ ಸಮುದಾಯ ನಡೆಸುವ ಆಸ್ಪತ್ರೆಗಳಿಗೆ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವ ಚಿಂತನೆ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೂಡ ಮಾಜಿ ಅಧ್ಯಕ್ಷ ಪಿಯೂಸ್ಎಲ್.ರೋಡ್ರಿಗಸ್,ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ.ಸೋಜ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಇದರ ಅಧ್ಯಕ್ಷ ಸ್ಟೇನಿ ಲೋಬೋ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ ಜೆ., ಸಮುದಾಯ ಅಭಿವೃದ್ಧಿ ಸಂಚಾಲಕ ಸಿರಿಲ್ ನೊರೊನ್ಹಾ, ರಾಜಕೀಯ ಸಂಚಾಲಕ ರಾಯನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಬಂಟ್ವಾಳ ಘಟಕದ ಅಧ್ಯಕ್ಷ ಜೋನ್ ಲಸ್ರಾದೋ ಸ್ವಾಗತಿಸಿದರು, ಕಾರ್ಯದರ್ಶಿ ಅಸ್ಟಿನ್ ಲೋಬೋ ವಂದಿಸಿದರು, ಅಲ್ಫೋನ್ಸ್ ಪೆರ್ನಾಂಡಿಸ್ ನೀರ್ಕಾನರವರು ಕಾರ್ಯಕ್ರಮ ನಿರೂಪಿಸಿದರು.