ವಗ್ಗ: ಸರ್ಕಾರಿ ಪ್ರೌಢಶಾಲೆ ಕಸದ ಬುಟ್ಟಿಯಲ್ಲಿ ಹೆಬ್ಬಾವು ಪತ್ತೆ
ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಸರ್ಕಾರಿ ಪ್ರೌಢಶಾಲೆಯ ಪ್ಲಾಸ್ಟಿಕ್ ಕಸದ ಬುಟ್ಟಿಯಲ್ಲಿ ಹೆಬ್ಬಾವು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
ಕಾರಿಂಜ ಕೊಡ್ಯಮಲೆ ರಕ್ಷಿತಾರಣ್ಯ ಸಮೀಪದಲ್ಲೇ ಇರುವ ಈ ಶಾಲೆಯ ಕೊಠಡಿಯೊಂದರ ಬಾಗಿಲಿನ ಎಡೆಯಲ್ಲಿ ಗುರುವಾರ ತಡರಾತ್ರಿ ಒಳ ಪ್ರವೇಶಿಸಿದ್ದ ಹೆಬ್ಬಾವು ಇಲಿಗಳನ್ನು ತಿಂದು ಹೊಟ್ಟೆ ತುಂಬಿದ ಬಳಿಕ ಹೊರಗೆ ಬರಲಾರದೆ ಅಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಮಲಗಿಕೊಂಡಿದೆ. ಇಲ್ಲಿನ ಮುಖ್ಯಶಿಕ್ಷಕರು ಎಂದಿನAತೆ ಶುಕ್ರವಾರ ಬೆಳಿಗ್ಗೆ ಬಂದು ಬಾಗಿಲು ತೆರೆದಾಗ ಹಾವು ಕಂಡು ಬೆರಗಾಗಿದ್ದಾರೆ. ಇದೇ ವೇಳೆ ಸಹಶಿಕ್ಷಕರ ನೆರವಿನಲ್ಲಿ ಅದನ್ನು ಚೀಲವೊಂದರಲ್ಲಿ ತುಂಬಿಸಿ ಪಕ್ಕದಲ್ಲೇ ಇರುವ ಕಾಡಿಗೆ ಬಿಟ್ಟಿದ್ದಾರೆ. ಕಳೆದ ವರ್ಷವೂ ಅಂಗಳದಲ್ಲಿ ನಾಗರ ಹಾವು ಮತ್ತು ಹೆಬ್ಬಾವು ಪತ್ತೆಯಾಗಿದ್ದು, ಸ್ನೇಕ್ ಕಿರಣ್ ಅವರನ್ನು ಕರೆಸುವಷ್ಟರಲ್ಲಿ ಸದ್ದಿಲ್ಲದೆ ಅದು ಬಿಲ ಸೇರಿತ್ತು. ಶಾಲೆಯಲ್ಲಿ ಹೆಂಚಿನ ಮಾಡು ಇರುವ ಹಿನ್ನೆಲೆಯಲ್ಲಿ ಇಲಿ ಕಾಟ ಇದೆ. ಇದಕ್ಕಾಗಿ ಕೆಲವೊಮ್ಮೆ ಇಲಿ ಹುಡುಕಿಕೊಂಡು ಹಾವು ಕಂಡು ಬರುತ್ತಿದೆ ಎಂದು ಮುಖ್ಯಶಿಕ್ಷಕ ಆದಂ ಶೇಖ್ ತಿಳಿಸಿದ್ದಾರೆ.
ಪ್ರತೀ ವರ್ಷ ಶೇ.೧೦೦ ಫಲಿತಾಂಶ ದಾಖಲಿಸುವ ಈ ಶಾಲೆಗೆ ಸರ್ಕಾರಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.