ಮೊಡಂಕಾಪು: ರೋಟರಿ ಕ್ಲಬ್ ಕಾರ್ಗಿಲ್ ವಿಜಯೋತ್ಸವ, ನಿವೃತ್ತ ಯೋಧರಿಗೆ ಸನ್ಮಾನ
ಬಂಟ್ವಾಳ:ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸಲು ಎಲ್ಲಾ ಜಾತಿ-ಧರ್ಮಗಳನ್ನು ಮೀರಿ ದೇಶದ ಹಿತ ಮತ್ತು ಗಡಿ ಕಾಯುವ ಸೈನಿಕರೇ ಮುಖ್ಯ ಕಾರಣ ಎಂದು ಮೊಡಂಕಾಪು ಚರ್ಚ್ ನ ಧರ್ಮಗುರು ವಲೇರಿಯನ್ ಡಿಸೋಜ ಹೇಳಿದ್ದಾರೆ.

ಇಲ್ಲಿನ ಮೊಡಂಕಾಪು ಮತ್ತು ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ವತಿಯಿಂದ ಕೈಕಂಬ ಸೂರ್ಯವಂಶ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ‘ಕಾರ್ಗಿಲ್ ವಿಜಯೋತ್ಸವ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕ್ಲಬ್ಬಿನ ಅಧ್ಯಕ್ಷ ಅಲೆಕ್ಸಾಂಡರ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಮಾಹಿತಿ ನೀಡಿದರು.
ರೋಟರಿ ಸಹಾಯಕ ಜಿಲ್ಲಾ ಗವರ್ನರ್ ಮಹಮ್ಮದ್ ವಳವೂರು, ಸಿಟಿ ಕ್ಲಬ್ಬಿನ ಅಧ್ಯಕ್ಷ ಸೇಸಪ್ಪ ಮಾಸ್ಟರ್, ಕ್ಲಬ್ಬಿನ ಮಾಜಿ ಅಧ್ಯಕ್ಷ ಡಾ.ಗೋವರ್ಧನ ರಾವ್ ಶುಭ ಹಾರೈಸಿದರು.
ಸಹಾಯಕ ಗವರ್ನರ್ ಜಯರಾಮ ರೈ, ಪ್ರಮುಖರಾದ ನಾರಾಯಣ ಹೆಗ್ಡೆ, ಸಂಜೀವ ಪೂಜಾರಿ, ಇಲ್ಯಾಸ್ ಸ್ಯಾಂಕ್ಟಿಸ್, ಕಿಶೋರ್ ಕುಮಾರ್ ಮತ್ತಿತರರು ಇದ್ದರು.
ಇದೇ ವೇಳೆ ನಿವೃತ್ತ ಸೈನಿಕರಾದ ಹವಾಲ್ದಾರ್ ತಿಮ್ಮಯ ಗೌಡ, ಶೇಖರ್ ಚೌಗಳ್, ಎನ್.ವಿ.ದಿನೇಶ್ ಕುಲಾಲ್, ಹವಾಲ್ದಾರ್ ಚೆರಿಯನ್, ನೂತನ್ ಬಂಗೇರ ಇವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷ ಅಲೆಕ್ಸಾಂಡರ್ ಲೋಬೊ ಸ್ವಾಗತಿಸಿ, ಮಾಜಿ ಅಧ್ಯಕ್ಷ ಪಿ.ಎ.ರಹೀಂ ವಂದಿಸಿದರು. ಶಿಕ್ಷಕಿ ಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು