ಪ್ರಾಕೃತಿಕ ವಿಕೋಪದ ಭಯಾನಕ ಸ್ಥಿತಿಯಲ್ಲೂ ನೇಪಾಳದ ಮುಕ್ತಿನಾಥನ ದರ್ಶನ ಪಡೆದ ತುಳುನಾಡ 117 ಭಕ್ತರು
ಬಂಟ್ವಾಳ: ಪ್ರಾಕೃತಿಕ ವಿಕೋಪದ ಭಯಾನಕ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ತುಳುನಾಡಿನ117 ಮಂದಿ ಭಕ್ತರು ನೇಪಾಳದ ಮುಕ್ತಿನಾಥನ ದರ್ಶನ ಪಡೆದು ಪುನೀತರಾದರು.ಬಂಟ್ಚಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಜಯ ಕುಮಾರ್ ಮತ್ತು ಜಯಶ್ರೀ ದಂಪತಿಗಳ ನೇತೃತ್ವದಲ್ಲಿ ದ.ಕ. ಜಿಲ್ಲೆಯ ವಿವಿಧ ಭಾಗದ ಸುಮಾರು 117 ಮಂದಿ ಭಕ್ತರು ಒರಿಸ್ಸಾದ ಪುರಿ ಜಗನಾಥ, ಜಾರ್ಕಂಡ್ ನ ಬಾಬಾ ಬೈದ್ಯಾನಾಥ ದೇವಸ್ಥಾನಗಳು, ನೇಪಾಲದ ಜನಕಗಿರಿಯ ಸೀತಾಮಾತಾ ಮಂದಿರ, ಪಶುಪತಿ ದೇವಾಲಯದ ದರ್ಶನಕ್ಕಾಗಿ ವಾರದ ಹಿಂದೆ ತೆರಳಿದ್ದರು.
ಪರಮ ಪವಿತ್ರ ಕ್ಷೇತ್ರವೊಂದಾದ ನೇಪಾಳದ ಮುಕ್ತಿನಾಥನ ದರ್ಶನಕ್ಕಾಗಿ ಬಸ್ಸಿನಲ್ಲಿ ತೆರಳುವ ರಸ್ತೆ ಮಧ್ಯೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೃಹತ್ ಗುಡ್ಡವೊಂದು ಜರಿದು ರಸ್ತೆಗೆ ಬಿದ್ದ ಪರಿಣಾಮ ಮುಕ್ತಿನಾಥನ ದರ್ಶನದ ಸಂಚಾರಕ್ಕೆ ಅಡಚಣೆಯಾಗಿತ್ತು ಎಂದು ಪ್ರವಾಸದಲ್ಲಿರುವ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಈ ಸಂದರ್ಭ ಮುಂದಕ್ಕೆ ಸಂಚರಿಸಲಾಗದೆ ಸಿಲುಕಬೇಕಾಯಿತು ಭಕ್ತರನೊಳಗೊಂಡ ಬಸ್ ಗಳು ನಿಲುಗಡೆಯಾದ ಸ್ಥಳದ ಪಕ್ಕದಲ್ಲೇ ದೊಡ್ಡ ದೊಡ್ಡ ಬಂಡೆಕಲ್ಲುಗಳು ನೋಡುತ್ತಿದ್ದಂತೆ ಉರುಳಿ ಬಸ್ಸಿನ ಸಮೀಪವೇ ಬಿದ್ದವು ಬಸ್ಸಿನಲ್ಲಿದ್ದ ಭಕ್ತಸಮೂಹ ರಸ್ತೆಯಲ್ಲಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಕಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ರಸ್ತೆಯು ಸಂಪೂರ್ಣ ಕೊಚ್ಚಿ ಹೋಗಿದ್ದು ಪ್ರಯಾಣಿಕರು ತುಂಬಿಕೊಂಡಿರುವ ಬಸ್ಸುಗಳನ್ನು ಹಗ್ಗ ಕಟ್ಟಿ ಎಳೆದು, ದೂಡಿಕೊಂಡು ಹೋಗುತ್ತಿರುವ ದೃಶ್ಯವು ಕಂಡುಬಂತು ಎಂದು ವಿವರಿಸಿದ ಪ್ರಭಾಕರ ಪ್ರಭು ಅವರು ನರಿಕೊಂಬು ನಿವಾಸಿ ಜಯಕುಮಾರ್ ಬಳಗವು ಕಳೆದ 20 ವರ್ಷಗಳಿಂದ ಯಾವುದೇ ಪ್ರತಿ ಫಲಾಫೇಕ್ಷೆ ಇಲ್ಲದೆ ಕರಾವಳಿ ಭಾಗದ ಅಫೇಕ್ಷಿತ ಭಕ್ತರನ್ನು ಒಟ್ಟುಗೂಡಿಸಿ ದೇಶದ ವಿವಿಧ ಪುಣ್ಯ ತೀರ್ಥ ಕ್ಷೇತ್ರಗಳನ್ನು ಭೇಟಿ ಮಾಡಿಸಿ ದೇವರ ದರ್ಶನ ಭಾಗ್ಯವನ್ನು ತೋರಿಸಿ ಕೊಟ್ಟು ಬಂದಿದ್ದಾರೆ.
ಅವರ ಈ ಪುಣ್ಯ ಕಾರ್ಯದಿಂದಾಗಿ 21 ನೇ ವರ್ಷದಲ್ಲಿ ಆಯೋಜಿಸಲಾದ ಈ ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ನೇಪಾಳ ದೇಶದಲ್ಲಿರುವ ಚೀನಾ ಗಡಿ ಭಾಗದಲ್ಲಿನ ಮುಕ್ತಿನಾಥ ದೇವಸ್ಥಾನವೂ ಒಂದಾಗಿರುತ್ತದೆ.
ಪ್ರಾಕೃತಿಕ ವಿಕೋಪದ ಸಂಕಷ್ಟ ಹಾದಿಯಲ್ಲೂ ಜಯಕುಮಾರ್ ಹಾಗೂ ವಾಹನ ಚಾಲಕರೂ ಭಕ್ತರಿಗೆ ಧೈರ್ಯ ತುಂಬಿದ್ದು, ಕರಾವಳಿಯ ತುಳುನಾಡ 117 ಮಂದಿ ಭಕ್ತರು ಜೀವದ ಹಂಗು ತೊರೆದು ನೇಪಾಲ ಮುಕ್ತಿನಾಥ ದೇವರ ದರ್ಶನ ಭಾಗ್ಯವನ್ನು ನೀಡಿದ್ದಾರೆ.ಇದೀಗ ಅಯೋದ್ಯೆಯತ್ತ ಪ್ರಯಾಣ ಬೆಳೆಸಿದ್ದು ಬಳಿಕ ಕಾಶಿ ವಿಶ್ವನಾಥ, ವೈಷ್ಣನೋ ದೇವಿಯ ದರ್ಶನ ಪಡೆದು ಮಂಗಳೂರಿಗೆ ವಾಪಸ್ ಅಗಲಿದ್ದೆವೆ ಎಂದು ಪ್ರಭು ತಿಳಿಸಿದ್ದಾರೆ.