ಬಿ.ಸಿ.ರೋಡು: ನಿಲ್ಲಿಸಿದ್ದ ಕ್ರೇನ್ ನಿಂದ ಬ್ಯಾಟರಿ ಕಳವು
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಖಾಸಗಿ ಸಂಸ್ಥೆಯೊಂದು ನಿಲ್ಲಿಸಿದ್ದ ಮೂರು ಕ್ರೇನ್ ನಿಂದ ಕಳ್ಳರು ಬ್ಯಾಟರಿ ಎಗರಿಸಿ ಪರಾರಿಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಕೈಕುಂಜೆ ಕನ್ನಡ ಭವನ ಬಳಿ ಗಜಲಕ್ಷ್ಮಿ ಸಂಸ್ಥೆ ಗೆ ಸೇರಿದ ಮೂರು ಕ್ರೇನ್ ಗಳನ್ನು ಬುಧವಾರ ರಾತ್ರಿ ಎಂದಿನಂತೆ ಚಾಲಕರು ನಿಲ್ಲಿಸಿ ಮನೆಗೆ ತೆರಳಿದ್ದರು. ಇವರು ಗುರುವಾರ ಬಂದು ನೋಡಿದಾಗ ಕ್ರೇನ್ ಎದುರಿನ ಬಾಗಿಲು ಮುರಿದು ಬ್ಯಾಟರಿ ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಬಿ.ಸಿ.ರೋಡು ನಗರ ಠಾಣೆ ಪೊಲೀಸರ ವಸತಿಗೃಹ ಸಮೀಪದಲ್ಲೇ ಕಳ್ಳರು ಕೈಚಳಕ ತೋರಿ ಅಚ್ಚರಿ ಮೂಡಿಸಿದ್ದಾರೆ. ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಸರಣಿ ಕಳವು ನಡೆದಿದ್ದು, ಬಸ್ ನಿಲ್ದಾಣ ಬಳಿ ಮಹಿಳೆಯೊಬ್ಬರ ಬ್ಯಾಗ್ ಎಗರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರು ಪತ್ತೆಯಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.