ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ೨೦೨೪-೨೫ ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಅತಿಥಿಗಳು ದೀಪ ಪ್ರಜ್ವಲನೆ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಯತ್ತ ಬಂದ ೧ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕ ವೃಂದದವರು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತಂದರು. ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಮಧುವ ತಿನ್ನಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಪವಿತ್ರವಾದ ಅಗ್ನಿಯನ್ನು ಪ್ರಜ್ವಲಿಸಿ, ಅತಿಥಿ, ಅಭ್ಯಾಗತರು ಘೃತಾಹುತಿ ಮಾಡಿದರು. ನಂತರ ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿ ಮಾಡಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಶಿಕ್ಷಣವೇ ದೇಶದ ಆಧಾರ ಸ್ತಂಭವಾಗಿದೆ. ನಮ್ಮತನವನ್ನು ತೊಡಗಿಸಿಕೊಂಡು ಈ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಚಿಂತಕರ, ದೇಶಾಭಿಮಾನದ ಶಿಕ್ಷಣ ನೀಡಬೇಕು. ಜಗತ್ತಿನ ಎಲ್ಲಾ ದೇಶಗಳು ರಾಷ್ಟ್ರೀಯತೆಯ ಶಿಕ್ಷಣವನ್ನೇ ಬೋಧಿಸುತ್ತದೆಯಾದರೂ ಇಂದಿನ ಸರ್ಕಾರ ಅಂತಹ ಪಠ್ಯಗಳನ್ನು ಕೈ ಬಿಟ್ಟಿದೆ ಎಂದರು.
ಎಳೆ ಮಕ್ಕಳ ಹೃದಯಂಗಳದಲ್ಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿ, ಅವರನ್ನೇ ರಾಷ್ಟ್ರದ ಶಕ್ತಿಯನ್ನಾಗಿಸುವ ಚಿಂತನೆಯ ನಿಟ್ಟಿನಲ್ಲಿ ಕಳೆದ ೪೦ ವರ್ಷಗಳಿಂದ ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರವು ನಮ್ಮ ಶಿಕ್ಷಣ ಸಂಸ್ಥೆ ನೀಡುತ್ತಾ ಬಂದಿದೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳು ಹೆಚ್ಚು ಅರ್ಥೈಸಿಕೊಳ್ಳುವ ಜೊತೆಗೆ, ನಮ್ಮ ಸಂಸ್ಕೃತಿ, ಧರ್ಮ, ಜೀವನ ಮೌಲ್ಯಗಳನ್ನು ಬಲು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಮಂಗಳೂರು ಕ್ರೆಡಿಟ್ ಬ್ಯಾಂಕ್ ಆಫ್ ಬರೋಡದ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಅರ್ಜುನ್ ರಾವ್, ಹಿರಿಯ ವ್ಯವಸ್ಥಾಪಕರಾದ ಜ್ಞಾನಶ್ರೀ ಅರ್ಜುನ್ ರಾವ್ ,ಕಾರ್ಕಳ ಮಾರುತಿ ಗ್ಯಾಸ್ ಏಜನ್ಸಿಯ ಮಾಲಕ ನಿತ್ಯಾನಂದ ಪೈ, ಬೋಳ ವಸುಂಧರಾ ಶ್ರೀನಿವಾಸ್ ಕಾಮತ್ ಕಾರ್ಕಳ, ಬೋಳ ಪ್ರಶಾಂತ್ ಕಾಮತ್ , ಬೋಳ ಪ್ರಿಯಂವದಾ ಪ್ರಶಾಂತ್ ಕಾಮತ್ , ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹ ಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ , ಸಹ ಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಎಮ್ ಉಪಸ್ಥಿತರಿದ್ದರು.
ಶ್ರೀ ರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀರಘುರಾಜ್ , ಮಲ್ಲಿಕಾ ಆರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಶೇಖರ ಸಾಲ್ಯಾನ್ ಹಾಗೂ ಪೋಷಕರು ಹಾಜರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಕ್ಷತಾಲಕ್ಷ್ಮೀ, ಚಿನ್ಮಯಿ, ಆಶಿಕಾ, ಧನ್ಯ ಶ್ರಮಿಕಾ ವೇದಮಂತ್ರ ಪಠಿಸಿದರು. ವಿದ್ಯಾರ್ಥಿಗಳಾದ ಸುಶ್ಮಿತಾ ಭಟ್ ಸ್ವಾಗತಿಸಿ, ಭೂಮಿಕಾ ವಂದಿಸಿದರು.
ಚಿನ್ಮಯಿ ಎನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,