ಕಾಂಜಿಲ್‌ಕೋಡಿ ರಸ್ತೆಗೆ ಉರುಳಿದ ಬೃಹತ್‌ಗಾತ್ರದ ಮರ ; ವಿದ್ಯುತ್ ಕಂಬಗಳು ಜಖಂ, ಮನೆಗೆ ಹಾನಿ
ಕೈಕಂಬ :ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಅಡ್ಡೂರು ಗ್ರಾಮದ ಕಾಂಜಿಲಕೋಡಿ ಎಂಬಲ್ಲಿ ಮಂಗಳವಾರ ಮುಂಜಾನೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಸುಮಾರು ೯ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಸ್ವಾಮಿವಿವೇಕಾನಂದ ರಸ್ತೆಯಲ್ಲಿ ಪೊಳಲಿ-ಬಿ.ಸಿ.ರೋಡ್ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಈ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿದ್ದು ಅಡ್ಡೂರು, ಪೊಳಲಿ, ಕಾಂಜಿಲಕೋಡಿ, ಕೈಕಂಬ ಭಾಗದಲ್ಲಿ ವಿದ್ಯುತ್ ಕೈಕೊಟ್ಟಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳೀಯರೊಂದಿಗೆ ದುರಸ್ತಿ ಕಾರ್ಯ ಆರಂಭಿಸಿ ªರಸ್ತೆಗೆ ಬಿದ್ದಿದ್ದ ಮರ, ವಿದ್ಯುತ್ ಕಂಬಗಳು ಹಾಗೂ ತಂತಿ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಅಡ್ಡೂರಿನ ಪೊನ್ನೆಲ ಎಂಬಲ್ಲಿ ಪದ್ಮನಾಭ ಎಂಬವರ ಮನೆಯಂಗಳದಲ್ಲಿದ್ದ ತೆಂಗಿನ ಮರವೊಂದು ಬಿದ್ದು ೨ ವಿದ್ಯುತ್ ಕಂಬಗಳು ಧರೆಗುರುಳಿವೆ. ಇಲ್ಲಿ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ.
ಅಡ್ಡೂರಿನ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಸುಮತಿ ಪೂಜಾರಿ ಎಂಬವರ ಮನೆ ಮೇಲೆ ಮರವೊಂದು ಬಿದ್ದು, ಮನೆಗೆ ಹಾನಿ ಉಂಟಾಗಿದೆ. ತಾರಿಕರಿಯದಲ್ಲಿ ಒಳರಸ್ತೆಯ ಬದಿಯಲ್ಲಿದ್ದ ಮರವೊಂದು ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ದೋಣಿಂಜೆಯ ಒಳರಸ್ತೆಗೆ ೪ ಮರಗಳು ಉರುಳಿ ಬಿದ್ದಿವೆ. ಮರ ಬೀಳುತ್ತಲೇ ೫ ವಿದ್ಯುತ್ ಕಂಬಗಳು ಮುರಿದಿದ್ದು, ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ರಸ್ತೆ ಸಂಚಾರವೂ ಒಂದ್ ಆಗಿದೆ. ಮೆಸ್ಕಾಂ ಸಿಬ್ಬಂದಿ ಗಾಳಿ-ಮಳೆ ಲೆಕ್ಕಿಸದೆ ತುರ್ತು ದುರಸ್ತಿ ಕಾರ್ಯ ಆರಂಭಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಕ್ರೇನ್ ಮೂಲಕ ರಸ್ತೆ ತೆರವುಗೊಳಿಸಲಾಯಿತು ಹೊಸ ವಿದ್ಯುತ್ ಕಂಬ ಅಳವಡಿಸಿದ್ದಾರೆ.