ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಸೊಳ್ಳೆಗಳ ನಿರ್ಮೂಲನೆಯೊಂದೇ ಸರಿಯಾದ ಮದ್ದು : ಡಾ.ನವೀನ್ ಚಂದ್ರ ಕುಲಾಲ್
ಬಂಟ್ವಾಳ ; ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಸೊಳ್ಳೆಗಳ ನಿರ್ಮೂಲನೆಯೊಂದೇ ಸರಿಯಾದ ಮದ್ದು ಎಂದು ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಆರೋಗ್ಯ ಇಲಾಖೆ, ಬಂಟ್ವಾಳ ರೋಟರಿ ಕ್ಲಬ್ ನ ಸಹಯೋಗದಲ್ಲಿ ಗುರುವಾರ ಬಂಟ್ವಾಳ ರೋಟರಿ ಸಭಾಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅತೀ ಅಗತ್ಯ ಎಂದ ಅವರು, ರೋಗಗಳ ನಿಯಂತ್ರಣ, ಜನಸಂಖ್ಯಾ ನಿಯಂತ್ರಣದಂತಾ ಕಾರ್ಯಗಳು ಯಶಸ್ವಿಯಾಗಬೇಕಿದೆ ಎಂದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬೇಬಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ್ವರ್ ಭಟ್ ಮಾತನಾಡಿ, ಜನಸಂಖ್ಯೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ, ಈ ಹಿನ್ನೆಲೆಯಲ್ಲಿ ಜನಸಂಖ್ಯಾ ನಿಯಂತ್ರಣ ಅತೀ ಅಗತ್ಯ ಎಂದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ನ ಕೋಶಾಧಿಕಾರಿ ಶಾಂತರಾಜ್, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ್ ಉಪಸ್ಥಿತರಿದ್ದರು.
ಕುಟುಂಬ ಯೋಜನೆಯಲ್ಲಿ ವಿಶೇಷ ಸಾಧನೆಗೈದ ಸಿಬ್ಬಂದಿಯವರನ್ನು ಹಾಗೂ ಆಶಾ ಕಾರ್ಯಕರ್ತೆಯವರನ್ನು ಸನ್ಮಾನಿಸಲಾಯಿತು. ಜನಸಂಖ್ಯಾ ದಿನಾಚರಣೆಯ ಪೂರ್ವ ಭಾವಿಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಜನಸಂಖ್ಯಾ ಸ್ಫೋಟದ ಬಗ್ಗೆ ಪ್ರಬಂಧ ಸ್ಪರ್ಧೆ ಯನ್ನು ಏರ್ಪಡಿಸಲಾಗಿದ್ದು ವಿಜೇತ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಮಿತ ಕುಟುಂಬದ ಪ್ರಯೋಜನಗಳ ಬಗೆಗಿನ ಚಿತ್ರ ಗಳನ್ನು ಪ್ರದರ್ಶಿಸಲಾಯಿತು. ತಾಲೂಕು ಅರೋಗ್ಯಧಿಕಾರಿ ಅಶೋಕ್ ಕುಮಾರ್ ರೈ ಸ್ವಾಗತಿಸಿದರು. ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ವಂದಿಸಿದರು. ಸಮುದಾಯ ಆರೋಗ್ಯಾಧಿಕಾರಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು