ಬಂಟ್ವಾಳ: ಸರ್ಕಾರಿ ನೌಕರರ ಪ್ರತಿಭಟನೆ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹ
ಬಂಟ್ವಾಳ:ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2.60 ಲಕ್ಷ ಹುದ್ದೆ ಖಾಲಿ ಇದ್ದರೂ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಜಿ ಎಸ್ ಟಿ ತೆರಿಗೆ ಸಂಗ್ರಹದಲ್ಲಿ ದೇಶಕ್ಕೆ ಮಾದರಿ ಎಂಬಂತೆ ದುಡಿಯುತ್ತಿರುವ 6ಲಕ್ಷ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಯಥಾವತ್ತಾಗಿ ಕೂಡಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಆಗ್ರಹಿಸಿದರು.

ಇಲ್ಲಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಬಿ.ಸಿ.ರೋಡು ಆಡಳಿತಸೌಧ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಫೆ.27ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಮಾರು 2.50 ಲಕ್ಷ ಸಕರ್ಾರಿ ನೌಕಕರ ಸಮ್ಮುಖದಲ್ಲಿ ಈ ಬಗ್ಗೆ ಭರವಸೆ ನೀಡಿದ್ದರೂ ಆದೇಶ ಜಾರಿಗೊಳಿಸಲು ವಿಳಂಬವಾಗುತ್ತಿದೆ.
ರಾಜ್ಯದಲ್ಲಿ ಖಾಲಿ ಇರುವ ಒಟ್ಟು 2.60ಲಕ್ಷ ಹುದ್ದೆಗಳ ಹೆಚ್ಚುವರಿ ಕೆಲಸವನ್ನೂ ಹಾಲಿ ಸರ್ಕಾರಿ ನೌಕರರು ನಿರ್ವಹಿಸುವ ಮೂಲಕ ಸುಮಾರು ರೂ 8500 ಕೋಟಿ ಮೊತ್ತ ಸರ್ಕಾರಕ್ಕೆ ಉಳಿತಾಯವಾಗುತ್ತಿದೆ. ನೂತನ ಪಿಂಚಣಿ ಯೋಜನೆಗೆ ಬದಲಾಗಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಗದುರಹಿತ ಚಿಕಿತ್ಸೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಆಗ್ರಹಿಸಿದರು. ನಿವೃತ್ತ ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ತುಂಬೆ, ಜೋಯೆಲ್ ಲೋಬೋ, ಕೆ.ರಮೇಶ ನಾಯಕ್ ರಾಯಿ, ಶಮಂತ್, ಮಂಜುನಾಥ್ ಕೆ., ಬಸಯ್ಯ ಆಲಿಮಟ್ಟಿ, ನೋಣಯ ನಾಯ್ಕ್, ರಾಜೇಂದ್ರ ರೈ, ಇಂದುಶೇಖರ್, ಪ್ರೇಮಾ, ಅನಿಲ್ ಕೆ.ಪೂಜಾರಿ, ಫ್ರಾನ್ಸಿಸ್ ಡೇಸಾ ಮತ್ತಿತರರು ಇದ್ದರು. ತಹಶೀಲ್ದಾರ್ ಅರ್ಚನಾ ಡಿ.ಭಟ್ ಮನವಿ ಸ್ವೀಕರಿಸಿದರು.