ಬಂಟ್ವಾಳ ಶಾಸಕರ ಹುಟ್ಟು ಹಬ್ಬ ಆಚರಣೆ, ವಿಶೇಷಚೇತನ ಹುಡುಗನಿಂದ ಭಾವಚಿತ್ರ ಹಸ್ತಾಂತರ
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಅವರು 66 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಗುರುವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಸಿಬ್ಬಂದಿಗಳು ಹಾಗೂ ಕಾರ್ಯಕರ್ತರ ಸಮಕ್ಷಮದಲ್ಲಿ ಆಚರಿಸಿದರು.

ಕೇಕ್ ಕತ್ತರಿಸಿದ ಶಾಸಕ ರಾಜೇಶ್ ನಾಯ್ಕ್ ಎಲ್ಲ ರಿಗೂ ಹಂಚಿ ಸಂಭ್ರಮಪಟ್ಟರು.ಶಾಸಕರ ಆಪ್ತ ಕಾರ್ಯದರ್ಶಿ ಶಿವಾನಂದ,ಕಚೇರಿ ಕಾರ್ಯದರ್ಶಿ ಪ್ರಣಾಮ್ ಅಜ್ಜಿಬೆಟ್ಟು ಹಾಗು ಕಚೇರಿ ಸಿಬ್ಬಂದಿಗಳು,ಪಕ್ಷದ ಕಾರ್ಯಕರ್ತರಾದ ಯಶೋಧರ ಕರ್ಬೆಟ್ಟು,ಆನಂದ ಎ.ಶಂಭೂರು,ಪುರುಷೋತ್ತಮ ಶೆಟ್ಟಿ,ಕಾರ್ತಿಕ್ ಬಲ್ಲಾಳ್,ಮನೋಜ್ ಕೋಟ್ಯಾನ್ ಮತ್ತಿತರರು ಹಾಜರಿದ್ದು, ಶಾಸಕರಿಗೆ ಶುಭ ಕೋರಿದರು. ಪಕ್ಷದ ಪ್ರಮುಖರು ಕಚೇರಿಗಾಗಮಿಸಿ ಶುಭಹಾರೈಸಿದರು.

ವಿಶೇಷಚೇತನ್ ಕೌಶಿಕ್ ನಿಂದ ಭಾವಚಿತ್ರ ಹಸ್ತಾಂತರ:-
ಬಂಟ್ವಾಳ ಕಂಚಿಗಾರ ಪೇಟೆಯ ಪ್ರತಿಭಾನ್ವಿತ, ವಿಶೇಷಚೇತನ ಬಾಲಕ ಕೌಶಿಕ್ ಆಚಾರ್ಯ ತನ್ನ ವಿದ್ಯಾಭ್ಯಾಸಕ್ಕೆ ನೆರವಾದ ಶಾಸಕ ರಾಜೇಶ್ ನಾಯ್ಕ್ ಅವರ ಭಾವಚಿತ್ರವನ್ನು ಕಾಲಲ್ಲೇ ಬಿಡಿಸಿ ಅದನ್ನು ಶಾಸಕರಿಗೆ ಹಸ್ತಾಂತರಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದರು.
ಹತ್ತನೆ ತರಗತಿಯ ಪರೀಕ್ಷೆಯನ್ನು ಕೌಶಿಕ್ ಆಚಾರ್ಯ ಕಾಲಿನಲ್ಲೇ ಬರೆದು,ಉತ್ತಮ ಅಂಕದೊಂದಿಗೆ ತೇರ್ಗಡೆಯಾಗುವ ಮೂಲಕ ರಾಜ್ಯಾದಾದ್ಯಂತ ಗಮನಸೆಳೆದಿದ್ದಲ್ಲದೆ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈತನ ಸಾಧನೆಯನ್ನು ಮೆಚ್ಚಿ ತಮ್ಮ ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದರು.
ಶಾಸಕ ರಾಜೇಶ್ ನಾಯ್ಕ್ ಅವರು ಕೌಶಿಕ್ ಗೆ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಸೇರಿಸಿ,ಮುಂದಿನ ಶಿಕ್ಷಣಕ್ಕೆ ನೆರವಾಗಿದ್ದರು. ಗುರುವಾರ ಭಾವಚಿತ್ರದೊಂದಿಗೆ ಕಚೇರಿಗಾಗಮಿಸಿ ತಾನು ಬಿಡಿಸಿರುವ ಭಾವಚಿತ್ರ ಶಾಸಕರಿಗೆ ಹಸ್ತಾಂರಿಸಿದ್ದಾನೆ.