ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರಿ ನೌಕರರ ಸಂಘದಿಂದ ಶಾಸಕರ ಮೂಲಕ ಸರಕಾರಕ್ಕೆ ಮನವಿ
ಬಂಟ್ವಾಳ: ಸರಕಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿ ಮುಂದಿನ ವಿಧಾನಸಭೆ ಅಧಿವೇಷನದ ವೇಳೆ ಸರಕಾರಿ ನೌಕರರ ಪರವಾಗಿ ಧ್ವನಿ ಎತ್ತುವಂತೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ವಿಷಯ ಪ್ರಸ್ತಾಪಿಸಿ ರಾಜ್ಯಾದ್ಯಂತ ೨.೬೦ ಲಕ್ಷ ಹುದ್ದೆಗಳು ಖಾಲಿಯಿದ್ದರೂ ಕೂಡ ಜನಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ದಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡಿ ರಾಜ್ಯಕ್ಕೆ ಮಾದರಿಯಾಗಲು ಸರಕಾರಿ ನೌಕರರ ಪಾತ್ರ ಪ್ರಮುಖವಾದುದು.
ಆದುದ್ದರಿಂದ ರಾಜ್ಯ ಏಳನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರಕಾರಿ ಆದೇಶ ಹೊಡಿಸಬೇಕು, ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿಯೋಜನೆಯನ್ನು ಮರು ಜಾರಿಗೊಳಿಸಬೇಕು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಬೇಕು ಎನ್ನುವ ಒತ್ತಾಯವನ್ನು ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಈ ಭಾಗದ ಶಾಸಕರು ಜೊತೆಯಾಗಿ ಮುಖ್ಯಂಮತ್ರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಸಲ್ಲಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ತುಂಬೆ, ಕೋಶಾಧಿಕಾರಿ ಬಸಯ್ಯ ಆಲಿಮಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾಧ್ ಶೆಟ್ಟಿ, ಪ್ರಮುಖರಾದ ಜೋಯಲ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.