ನೇತ್ರಾವತಿ ನದಿ ಮಾಲಿನ್ಯ :ಕರಪತ್ರ, ಭಿತ್ತಿಪತ್ರ ಹಂಚಿಕೆ
ಬಂಟ್ವಾಳ: ಸಂವಾದ ಯುವ ಮುನ್ನಡೆ ತಂಡದಿಂದ ನೇತ್ರಾವತಿ ನದಿ ಮಾಲಿನ್ಯದ ಕುರಿತು “ನೀರ ದಾರಿಯ ನಡೆ” ಎರಡನೇ ದಿನದ ಪಾದಯಾತ್ರೆಗೆ ಸೋಮವಾರ ಬಿ.ಸಿ ರೋಡಿನಲ್ಲಿ ಚಾಲನೆ ನೀಡಲಾಯಿತು. ಸಾರ್ವಜನಿಕರು, ಅಂಗಡಿ, ಹೊಟೇಲು, ಪ್ರಯಾಣಿಕರ ಜೊತೆ ನದಿ ಮಾಲಿನ್ಯದ ಕುರಿತಂತೆ ಮಾತುಕತೆ ನಡೆಸುವುದರ ಜೊತೆಗೆ ಜನಜಾಗೃತಿಗೆ ಕರಪತ್ರ ಮತ್ತು ಭಿತ್ತಿಪತ್ರ ಹಂಚಲಾಯಿತು.

ಬಂಟ್ವಾಳದ ಮಿನಿ ವಿಧಾನಸೌಧದ ವಿವಿಧ ಇಲಾಖೆಗಳನ್ನು ಯುವ ಮುಂದಾಳುಗಳು ಭೇಟಿ ಮಾಡಿ ನೇತ್ರಾವತಿ ನದಿ ಮಾಲಿನ್ಯದ ಬಗ್ಗೆ ಚರ್ಚೆ ನಡೆಸಿದರು. ನ್ಯಾಯಾಲಯ, ತೋಟಗಾರಿಕೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಶಾಸಕರ ಕಛೇರಿ, ಮೂಡಾ ಕಛೇರಿಗಳನ್ನು ಭೇಟಿ ಮಾಡಿದರು.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತುಂಬೆ ಶಾಲೆಯ ಮಕ್ಕಳ ಜೊತೆ ಸಂವಾದ ನಡೆಸಿದ ಯುವ ಮುಂದಾಳುಗಳು ನೇತ್ರಾವತಿ ನದಿ ಪಾತ್ರದ ವಳವೂರು ಮಸೀದಿ, ಹರೇಕಳ ಸೇತುವೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಉತ್ತಮ ಸ್ಪಂದನೆ ದೊರೆತಿದೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.