Published On: Mon, Jul 8th, 2024

ಬಿ.ಸಿ.ರೋಡು: ಜು.೧ರಿಂದ ‘ಹೊಸ ಮೆನು’ ಪ್ರಭಾವ ‘ಇಂದಿರಾ ಕ್ಯಾಂಟೀನ್’ಗೆ ಹೊಸ ಗ್ರಾಹಕರ ದಂಡು

ಬಂಟ್ವಾಳ: ಕಳೆದ ೬ ವರ್ಷಗಳ ಹಿಂದೆ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಭಾರೀ ರಾಜಕೀಯ ವಿವಾದಗಳ ನಡುವೆ ಆರಂಭಗೊAಡಿದ್ದ ‘ಇಂದಿರಾ ಕ್ಯಾಂಟೀನ್’ ಇದೀಗ ಹೊಸ ಮೆನು ಆರಂಭಗೊAಡು ಜನಾಕರ್ಷಣೆಗೆ ಕಾರಣವಾಗಿದೆ. ಈ ಹಿಂದೆ ಕೇವಲ ೫ ರೂಪಾಯಿಗೆ ಬೆಳಿಗ್ಗೆ ಮತ್ತು ಸಂಜೆ ತಿಂಡಿ, ರೂ ೧೦ ರೂಪಾಯಿಗೆ ಮಧ್ಯಾಹ್ನ ಅನ್ನ ಸಾಂಬಾರ್ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಒಂದೂವರೆ ವರ್ಷ ದಾಟುತ್ತಿದ್ದಂತೆಯೇ ಆಯಾಯ ಜಿಲ್ಲೆಗೆ ತಕ್ಕಂತೆ ಜು.೧ರಿಂದ ‘ಹೊಸ ಮೆನು’ ಜಾರಿಗೊಳಿಸಿದೆ.

ಇಂದಿರಾ ಕ್ಯಾಂಟೀನ್’ ‘ಹೊಸ ಮೆನು’
ಸೋಮವಾರ: ನೀರು ದೋಸೆ ಚಟ್ನಿ ಮತ್ತು ಇಡ್ಲಿ ಸಾಂಬಾರು, ಮಂಗಳವಾರ: ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ -ಅವಲಕ್ಕಿ, ಬುಧವಾರ: ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ, ಗುರುವಾರ: ಇಡ್ಲಿ ಸಾಂಬಾರು ಮತ್ತು ಪಲಾವ್, ಶುಕ್ರವಾರ: ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ, ಶನಿವಾರ: ಇಡ್ಲಿ ಸಾಂಬಾರು ಮತ್ತು ಬನ್ಸ್, ಭಾನುವಾರ: ಇಡ್ಲಿ ಸಾಂಬಾರು ಮತ್ತು ಕ್ಷೀರ ಸಿಗುತ್ತಿದೆ.


ಬೆಳಿಗ್ಗೆ ಗಂಟೆ ೭ರಿಂದ ೧೦ ಗಂಟೆತನಕ ಮತ್ತು ಸಂಜೆ ಗಂಟೆ ೫ರಿಂದ ೭ ಗಂಟೆತನಕ ಬಿಸಿ ಬಿಸಿ ತಿಂಡಿ ಕೇವಲ ರೂ ೫ ರೂಪಾಯಿಗೆ ಇಲ್ಲಿ ಸಿಗುತ್ತಿದೆ.ಮಧ್ಯಾಹ್ನ ಗಂಟೆ ೧೨.೩೦ರಿಂದ ೩ ಗಂಟೆ ತನಕ ಚಪಾತಿ ಸಹಿತ ಊಟ ಸಿಗುತ್ತಿದೆ. ಈ ಹಿಂದೆ ೧೦ ರೂಪಾಯಿಗೆ ಕುಚಲಕ್ಕಿ ಅನ್ನ ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಪಲ್ಯ ಸಿಗುತ್ತಿತ್ತು. ಇದೀಗ ರೂ ೧೦ ರೂಪಾಯಿ ಊಟದ ಜೊತೆಗೆ ಹೆಚ್ಚುವರಿ ರೂ ೧೦ ಪಾವತಿಸಿದರೆ ಎರಡು ಚಪಾತಿ ಮತ್ತು ಬಟಾಟೆ ಬಾಜಿಯೂ ಸಿಗುತ್ತಿದೆ.


ಈ ನಡುವೆ ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜೊತೆಗೆ ಪಾಯಸವೂ ಸಿಗುತ್ತಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
ಕಳೆದ ಐದಾರು ವರ್ಷಗಳಲ್ಲಿ ಕೇವಲ ೨೦೦ ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದು, ಈ ಪೈಕಿ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರು ಗರಿಷ್ಟ ಸಂಖ್ಯೆಯಲ್ಲಿದ್ದರು. ಜು.೧ರಿಂದ ೨೫೦ರಿಂದ ೩೦೦ ಮಂದಿ ಬರುತ್ತಿದ್ದಾರೆ. ಇದರಿಂದಾಗಿ ಚಪಾತಿ ಬೇಗನೆ ಖಾಲಿಯಾಗುತ್ತಿದೆ. ಇದೀಗ ವಿವಿಧ ಇಲಾಖೆಗಳಿಗೆ ಬರುವ ಗ್ರಾಮೀಣ ಜನರು ಮಾತ್ರವಲ್ಲದೆ ಅಲ್ಲಿನ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕೂಡಾ ಬರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಆನಂದ ಪೂಜಾರಿ ಮತ್ತು ಅಬ್ದುಲ್ ರಝಾಕ್.
ಇಂದಿರಾ ಕ್ಯಾಂಟೀನ್ ತಿಂಡಿ ಮತ್ತು ಊಟ ಕಡಿಮೆ ದರದಲ್ಲಿ ರುಚಿಕರ ಮತ್ತು ಗುಣಮಟ್ಟ ಕಾಯ್ದುಕೊಂಡಿದ್ದು, ಜು.೧ರಿಂದ ನಾವು ಕೂಡಾ ಹೋಗುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತು ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಬೇಡಿಕೆ:
ಕಳೆದ ಐದಾರು ವರ್ಷಗಳಿಂದಲೂ ಕೇವಲ ನಾಲ್ಕು ಮಂದಿ ಸಿಬ್ಬಂದಿ ಮಾತ್ರ ಇದ್ದೇವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ರಜೆ ಹಾಕದೆ ನಿಷ್ಠೆಯಿಂದ ದುಡಿದಿದ್ದೇವೆ. ಇದೀಗ ಗ್ರಾಹಕರು ಹೆಚ್ಚಾದಂತೆ ಸಿಬ್ಬಂದಿ ಹೆಚ್ಚಳವೂ ಅಗತ್ಯವಿದೆ. ಇಲ್ಲಿನ ಫ್ರಿಜ್ ಕೆಟ್ಟು ಎರಡು ವರ್ಷ ಕಳೆದರೂ ದುರಸ್ತಿಗೊಳಿಸಿಲ್ಲ. ನಮಗೆ ವೇತನ ಹೆಚ್ಚಳದ ಜೊತೆಗೆ ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಈಚೆಗಷ್ಟೇ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಜಯ ಪೂಜಾರಿ ಮತ್ತು ಚಂದ್ರಾವತಿ ಅಳಲು ತೋಡಿಕೊಂಡಿದ್ದಾರೆ.

ಈ ಕ್ಯಾಂಟೀನ್ ಗೆ ಸುಣ್ಣ-ಬಣ್ಣ ನೀಡಿ ಸುಂದರಗೊಳಿಸುವ ಅಗತ್ಯವಿದೆ ಎಂಬ ಸಲಹೆ ಗ್ರಾಹಕರಿಂದ ಕೇಳಿ ಬಂದಿದೆ.ಕಳೆದ ೨೦೧೮ರ ಮಾ.೧೨ರಂದು ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಮಾಜಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ ಬಳಿಕ ಅದೇ ವರ್ಷ ಡಿ.೯ರಂದು ಅಂದಿನ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮತ್ತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಿದ್ದರು.

ಈ ಇಂದಿರಾ ಕ್ಯಾಂಟೀನ್ ಆರಂಭಿಸಲು ಉತ್ಸಾಹ ತೋರಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದು, ಉದ್ಘಾಟನೆ ವೇಳೆ ಹಾಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶಾಸಕರಾಗಿದ್ದರು.
-ಮೋಹನ್ ಕೆ.ಶ್ರೀಯಾನ್ ರಾಯಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter