ವಗ್ಗಬಳಿ ಲಾರಿ ಸ್ಕೂಟರ್ ಗೆ ಢಿಕ್ಕಿ, ಸಹಸವಾರ ಸಾವು,ಸವಾರ ಗಂಭೀರ
ಬಂಟ್ವಾಳ: ಗೂಡ್ಸ್ ಮಿನಿಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸಹ ಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಕಾಸರಗೋಡು ಸಮೀಪದ ಬೇಕಲ ನಿವಾಸಿ ನಿಖಿಲ್(೨೪) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸ್ಕೂಟರ್‌ಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಗೆ ಎದುರು ಕಡೆಯಿಂದ ಬರುತ್ತಿದ್ದ ಮಿನಿಲಾರಿ ಢಿಕ್ಕಿಯಾಗಿದೆ. ಪಿಕಪ್ ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮಿನಿಲಾರಿ ಸ್ಕೂಟರ್‌ಗೆ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ನಿಖಿಲ್ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ದಾರುಣವಾಗಿ ಸಾವಿನ್ನಪ್ಪಿದ್ದಾರೆ.
ಕೂಡಲೇ ಸ್ಥಳೀಯರು ಗಾಯಾಳು ಗುರುಪ್ರೀತ್ ಅವರನ್ನು ಅಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಟ್ರಾಫಿಕ್ ಎಸ್‌ಐ ಸುತೇಶ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.