ಬಂಟ್ವಾಳ: ವ್ಯಾಪಕ ಮಳೆ,ಹಾರಿದ ಅಂಗಡಿ ಶೀಟ್,ವಿವಿದೆಡೆ ಹಾನಿ
ಬಂಟ್ವಾಳ: ಶುಕ್ರವಾರ ರಾತ್ರಿಯಿಂದ ಬಂಟ್ವಾಳದಾದ್ಯಂತ ಧಾರಾಕಾರ ಮಳೆಯಾಗಿದ್ದು,ವ್ಯಾಪಕ ಹಾನಿ ಕೂಡ ಸಂಭವಿಸಿದೆ.
ಬಂಟ್ವಾಳ ತಾಲೂಕಿನಲ್ಲಿ ಬೆಳಿಗ್ಗೆ ಬೀಸಿದ ಬಿರುಗಾಳಿಗೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಖಾದರ್ ಇಕ್ರಾ ಅವರಿಗೆ ಸೇರಿದ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಅಳವಡಿಸಿರುವ ಶೀಟ್ ಗಳು ಹಾರಿ ಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದೆ.ಈ ಘಟನೆಯಲ್ಲಿ ಯಾವುದೇ ರೀತಿಯ ಜೀವ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.ಇದೇ ಗ್ರಾಮದಲ್ಲಿ ಅಬ್ದುಲ್ ಖಾದರ್ ಎಂಬುವವರ ಮನೆ ಗಾಳಿ- ಮಳೆಗೆ ಭಾಗಶಃ ಹಾನಿ ಆಗಿರುತ್ತದೆ.
ವೀರಕಂಭ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ರವರ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿರುತ್ತದೆ.ಕುರಿಯಾಳ ಗ್ರಾಮದ ಕುರಿಯಾಳ ಪಡು ಎಂಬಲ್ಲಿ ಉಗ್ಗಪ್ಪ ಪೂಜಾರಿ ಎಂಬವರ ಮನೆಯ ಪಕ್ಕದ ಕೊಟ್ಟಿಗೆ ಹಾನಿಯಾಗಿದೆ. ಪೆರ್ನೆಯ ಸೀತಾ ನಾಯ್ಕ, ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿರುತ್ತದೆ.
ಇರ್ವತ್ತೂರು ಗ್ರಾಮದ ನವೀನ್ ಮೂಲ್ಯ ಎಂಬವರ ದನದ ಹಟ್ಟಿಗೆಗೆ ಹಾನಿ ಆಗಿದ್ದರೆ,ಕೊಳ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ರವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿರುತ್ತದೆ.ಇಡ್ಕಿದು ಗ್ರಾಮದ ಅಳಕೆಮಜಲು ಎಂಬಲ್ಲಿ ಶೀನ ಎಂಬವರ ಮನೆಯ ಶೌಚಾಲಯಕ್ಕೆ ತೀವ್ರ ಹಾನಿಯಾಗಿರುತ್ತದೆ.
ಸ್ಥಳೀಯ ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.ನೇತ್ರಾವತಿ ನದಿಯಲ್ಲು ನೀರು ಉಕ್ಕಿ ಹರಿಯುತ್ತಿದ್ದು,ಸಂಜೆಯ ವೇಳೆಗೆ ನೇತ್ರಾವತಿನದಿಯಲ್ಲಿ ನೀರು 3.8 ಮೀ. ಅಡಿ ಎತ್ತರದಲ್ಲಿ ಹರಿಯುತ್ತಿತ್ತು.