ಪರಿಸರ, ವೃಕ್ಷ, ವನ ಸಂರಕ್ಷಣೆ ಸಮೃದ್ಧ ಬದುಕಿಗೆ ಸೋಪಾನ: ಈಶ್ವರ ಖಂಡ್ರೆ
ಬಂಟ್ವಾಳ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಪರಿಸರ, ಪ್ರಕೃತಿ, ವೃಕ್ಷ ಮತ್ತು ವನ ಸಂರಕ್ಷಣೆ ಸಮೃದ್ಧ ಬದುಕಿಗೆ ಸೋಪಾನವಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಬಂಟ್ವಾಳ ತಾಲೂಕಿನ ಕಾವಳಪಡೂರುಗ್ರಾಮದ ಆಲಂಪುರಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ, ಪ್ರಾಣಿ ಮತ್ತು ವನ ಸಂರಕ್ಷಣೆಯ ಕಾರ್ಯ ನಮ್ಮ ಸಂಕಲ್ಪವಾಗಬೇಕು ಎಂದು ಹೇಳಿದರು.

ಪರಿಸರ ದಿನ, ವನಮಹೋತ್ಸವದ ದಿನದಂದು ಮಾತ್ರ ಸಸಿ ನೆಟ್ಟು, ನಮ್ಮ ಪರಿಸರ ಪ್ರೇಮ ಮೆರೆದರೆ ಸಾಲದು, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ಐದು ವರ್ಷದಲ್ಲಿ ರಾಜ್ಯಾದಾದ್ಯಂತ 25 ಕೋಟಿ ಸಸಿಗಳನ್ನು ನಾಟಿ ಮಾಡುವ ಗುರಿಯನ್ನು ಹೊಂದಲಾಗಿದ್ದು, ಕಳೆದ ಒಂದು ವರ್ಷದಲ್ಲಿ 5.43 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದ ಸಚಿವರು ಇದರಲ್ಲಿ ಸಂರಕ್ಷಣೆಯಾಗಿರುವ ಸಸಿಗಳೆಷ್ಟು ಎಂಬುದನ್ನು ಮೂರನೇ ಏಜನ್ಸಿಯಿಂದ ಪರಿಶೀಲನೆ ನಡೆಸಲಾಗುವುದು ಸುಮಾರು 85 ರಿಂದ 90 ಶೇ.ಸಸಿಗಳು ಬದುಕುಳಿದಿರುವ ವಿಶ್ವಾಸವಿದೆ ಎಂದು ಹೇಳಿದರು.

ಕಳೆದ ಕೆಲವು ತಿಂಗಳುಗಳಲ್ಲಿ ಇಡೀ ಜಗತ್ತು ಬಿರು ಬಿಸಿಲಿನ ತಾಪದಿಂದ ತತ್ತರಿಸಿ ಹೋಯಿತು. ಭಾರತದಲ್ಲಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಜನರು ಸೌರಾಘಾತಕ್ಕೆ ಈಡಾಗಿದ್ದು, 100ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಸೌರಶಾಖ ತಾಳಲಾರದೆ ನರಳಿ ಮೃತಪಟ್ಟಿದ್ದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ತಾಪಮಾನ ಏರಿಕೆ ತಡೆಯಲು ವೃಕ್ಷ ಸಂರಕ್ಷಣೆಯೇ ಪರಿಹಾರ ಎಂದರು.
ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು, ಬೆಟ್ಟ, ಗುಡ್ಡ, ನದಿ ಪೂಜಿಸುತ್ತಿದ್ದರು. ಅವರಿಗೆ ಪರಿಸರದ ಕಾಳಜಿ ಇತ್ತು. ನಾವು ಕೂಡ ಪರಿಸರ ಸಂರಕ್ಷಣೆ ಮಾಡಿ, ಇರುವುದೊಂದೇ ಭೂಮಿಯನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಅರಣ್ಯದ ಬಳಿ, ಅರಣ್ಯದಲ್ಲಿ ಪಶು,ಪಕ್ಷಿಗಳಿಗೆ ಆಹಾರ ನೀಡುವ ಫಲ ನೀಡುವ ವೃಕ್ಷ ನಾಟಿ ಮಾಡುವ ಈ ಯೋಜನೆ ಫಲಪ್ರದ ಕಾರ್ಯಕ್ರಮ ಎಂದು ಬಣ್ಣಿಸಿದರು.
ಸರಕಾರ ಕಾಯ್ದೆ,ಕಾನೂನು ಜಾರಿ ಮಾಡಿದರೆ ಸಾಲದು ಜನರ ಸಹಭಾಗಿತ್ವ ಇದ್ದಾಗ ಮಾತ್ರ ಏಕವಾಣಿ ಪ್ಲಾಸ್ಟಿಕ್ ನಿಷೇಧ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು ಸಾಧ್ಯ ಎಂದ ಸಚಿವರು ಅರಣ್ಯ ಇಲಾಖೆಯ ಮೂಲಕ ಅಗುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಬದ್ದನಿರುವುದಾಗಿ ಹೇಳಿದರು
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಹೊಸ ಸಸಿ ನೆಡುವುದರ ಜೊತೆಗೆ ಇರುವ ವೃಕ್ಷಗಳ ಸಂರಕ್ಷಣೆಯನ್ನೂ ನಾವು ಮಾಡಬೇಕು. ಆಗ ಮಾತ್ರ ಹಸಿರು ಉಳಿಸಲು ಸಾಧ್ಯ ಎಂದುಪ್ರತಿಪಾದಿಸಿದರು.
ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಮೂಲಕ ಜನರ ಸಹಕಾರದಲ್ಲಿ ಸುಮಾರು 600 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದೆ.ಕಳೆದ ಮೂರು ವರ್ಷಗಳಲ್ಲಿ ಒಟ್ಟು 7.33,936 ವಿವಿಧ ಗಿಡಗಳನ್ನು ನಾಟಿ ಮಾಡಿ ರಕ್ಷಿಸಲಾಗಿದೆ.ಸಸಿಗಳನ್ನು ನೆಟ್ಟು ಅದನ್ನು ಪೋಷಿಸಿ ಬೆಳೆಸುವಲ್ಲಿ “ಶೌರ್ಯ” ಸ್ವಯಂಸೇವಕರ ಪಾತ್ರ ಅಪಾರವಾಗಿದೆ.ಗಿಡ ನಾಟಿ ಪ್ರೇರಣಾ ಕಾರ್ಯಕ್ರಮವಾಗಿದ್ದು,ಮುಂದಿನ ಜನಾಂಗದ ಆಸ್ತಿಯಾಗಿದೆ ಎಂದು ಡಾ.ಹೆಗ್ಗಡೆ ಹೇಳಿದರು.
ಸಚಿವರಿಂದ ಸಸ್ಯೋದ್ಯಾನ ವೀಕ್ಷಣೆ:
ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅರಣ್ಯ ಅಧಿಕಾರಿಗಳಿಂದ ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಪುತ್ತೂರಿನ ಅವಿನಾಶ್ ಕೊಡಂಕಿರಿ ಅವರಿಗೆ “ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನಗೈದು ಮಾತನಾಡಿದಮಾಜಿ ಸಚಿವ ರಮಾನಾಥ ರೈ ಅವರು ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸರ್ಕಾರ ತಾಲೂಕಿಗೊಂದು ಸಸ್ಯೋದ್ಯಾನ ನಿರ್ಮಿಸುತ್ತಿದ್ದು, ಎಲ್ಲ ಊರಿನಲ್ಲೂ ಶುದ್ಧ ಗಾಳಿಗೆ ಒಂದು ನಿರ್ದಿಷ್ಟ ಸ್ಥಳ ಕಾಯ್ದಿರಿಸುತ್ತಿದೆ ಎಂದು ತಿಳಿಸಿದರು.
ವಿವಿಧ ಸಂಸ್ಥೆಗಳಿಗೆ ಸಸಿ ವಿತರಣೆಗೈದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ, ತ್ಯಾಜ್ಯವನ್ನು ಸಂಸ್ಕರಿಸಿ ಅದರ ನೀರು,ಗೊಬ್ಬರವನ್ನು ಸಸಿಗಳಿಗೆ ಉಪಯೋಗಿಸಿದರೆ ಸಮೃದ್ದವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಇಂತಹ ಪ್ರಯೋಗವನ್ನು ತನ್ನ ಕೃಷಿ ಭೂಮಿಯಲ್ಲಿ ಮಾಡಿದ್ದು,ಇದರ ವೀಕ್ಷಣೆಗೆ ಸಚಿವರನ್ನು ಆಹ್ವಾನಿಸಿದರಲ್ಲದೆ ಈ ರೀತಿಯ ಯೋಜನೆಯಿಂದ ಗಾಂಧೀಜಿಯವರ ಕನಸಿನಂತೆ ಪ್ರತಿ ಗ್ರಾಮವು ಸ್ವಾವಲಂಬಿ ಗ್ರಾಮವಾಗಲಿದೆ ಎಂದರು.
ಇದೇ ವೇಳೆ ಕೃಷಿ ಅರಣ್ಯ ಪಾಲುದಾರರಿಗೆ ಪ್ರೋತ್ಸಾಹಧನ ವಿತರಿಸಲಾಯಿತಲ್ಲದೆ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾಗಟ್ಟಿ,ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ,ಮಂಗಳೂರು ವೃತ್ತ ಸಿ ಎಫ್ ಡಾ.ವಿ. ಕರಿಕಾಲನ್, ಮಂಗಳೂರು ವಿಭಾಗ ಡಿ.ಸಿ. ಎಫ್ ಅಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ,ಅರಣ್ಯ ಅಧಿಕಾರಿಗಳಾದಕಮಲಾ ಕರಿಕಾಲನ್ ,ಶಿವರಾಮ್ ಬಾಬು,, ಬಂಟ್ವಾಳ ತಾಲೂಕು ಜನಜಾಗೃತಿ ಅಧ್ಯಕ್ಷ ರೋನಾಲ್ಡ್ ಡಿಸೋಜ ಅಮ್ಟಾಡಿ,ಕಾರಿಂಜಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯೆ,ಜಿ.ಪಂ.ಮಾಜಿ ಸದಸ್ಯರಾದ ಪದ್ಮಶೇಖರಜೈನ್, ಸುಲೋಚನಾ ಜಿ.ಕೆ.ಭಟ್,ಕಾವಳಪಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿನರಾಜ ಅರಿಗ,ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಎಸ್ .ಎಸ್ ಪ್ರಸ್ತಾವನೆಗೈದು,ಸ್ವಾಗತಿಸಿದರು.ಶ್ರೀ.ಕ್ಷೇ.ಧ.ಗ್ರಾ.ಯೋ.ಯಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು.ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯಸ್,ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.