ರಾ.ಹೆ.ಯ ತುಂಬೆಯಲ್ಲಿ ಈಜುಕೊಳ,ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ವ್ಯಾಪಕ ಹಾನಿ
ಬಂಟ್ವಾಳ : ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆ, ಬುಧವಾರ ಬೆಳಗ್ಗೆ ಬಿರುಸಾಗಿದ್ದು, ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದ್ದು,ಅಪಾರ ನಷ್ಟ ಉಂಟಾಗಿದೆ. ಈಗಾಗಲೇ ರಾ.ಹೆ.ಯ ತುಂಬೆಯಲ್ಲಿ ರಸ್ತೆಯ ತುಂಬಾ ಮಳೆ ನೀರು ನಿಂತು ವಸ್ತುಶ: ಈಜುಕೊಳದಂತಾದರೆ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡ್ ಜಂಕ್ಷನ್ ಸಹಿತ ಹಲವು ಪ್ರದೇಶಗಳಲ್ಲಿ ನಡೆಯಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆ, ಕಾಲೇಜುಗಳಿಗೆ ರಜೆಯೂ ಇಲ್ಲದ ಕಾರಣ, ಬೆಳಗ್ಗೆ ಮಕ್ಕಳು ಶಾಲೆಗೆ ಧಾರಾಕಾರ ಸುರಿಯುತ್ತಿರುವ ಮಳೆಯಲ್ಲೇ ಬಸ್ ಹತ್ತಬೇಕಾಯಿತು. ನಡೆದುಕೊಂಡು ಹೋಗುವ ಮಕ್ಕಳು ಒದ್ದೆಯಾಗಿಯೇ ಶಾಲಾ ತರಗತಿ ಪ್ರವೇಶಿಸಬೇಕಾಯಿತು. ಇನ್ನು ಗಾಳಿ,ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳು ಸಂಭವಿಸಿದ್ದು, ಅವುಗಳ ವಿವರ ಹೀಗಿದೆ.
ಬಂಟ್ವಾಳ ಕಸಬಾ ಗ್ರಾಮದ ಹೂಸ್ಮಾರ್ ಎಂಬಲ್ಲಿ ಅಶೋಕ್ ಹಾಗೂ ಗಣೇಶ ಪೂಜಾರಿ ಎಂಬುವರ ಮನೆ ಬದಿಯ ಕಾಂಪೌಡ್ ಕುಸಿದು ರಸ್ತೆಗೆ ಬಿದ್ದಿದ್ದು, ಇವರಿಬ್ಬರ ಮನೆಗಳು ಅಪಾಯ ಸ್ಥಿತಿಯಲ್ಲಿರುವ ಹಿನ್ನಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಪುರಸಭೆ ಜೆಸಿಬಿಯ ಮೂಲಕ ಮಣ್ಣು ತೆರವು ಕಾರ್ಯಾಚರಣೆ ಮಾಡಲಾಯಿತು. ಇಲ್ಲಿ ಕಾಂಪೌಂಡ್ ಗೆ ತಡೆಗೋಡೆ ನಿರ್ಮಾಣದ ತುರ್ತು ಅವಶ್ಯಕತೆ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕಂದಾಯಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ
ಕೆದಿಲ ಗ್ರಾಮದ ಗಾಂದಿ ನಗರ ಪೂವಕ್ಕ ಎಂಬವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.ನೆಟ್ಲ ದೇವಸ್ಥಾನದ ಬಳಿ ಮರ ಬಿದ್ದು ಪಕ್ಕದ ಮನೆಯೊಂದರ ಕಂಪೌಂಡು ಗೋಡೆ ಹಾನಿಯಾಗಿದೆ.

ಅದೇರೀತಿಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಎಂಬವರ ಮನೆ ಮೇಲೆ ಅಶ್ವಥ ಮರ ಬಿದ್ದು ಭಾಗಶಃ ಹಾನಿಯಾಗಿದ್ದಲ್ಲದೆ ಕಾಂಪೌಂಡ್ ಗೋಡೆಗೆ ಕೂಡ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಭತ್ತದ ಗದ್ದೆಯಲ್ಲಿ ಮಳೆ ನೀರು ನಿಂತು ಬೆಳೆ ನಾಶವಾಗಿದೆಯಲ್ಲದೆ ಇದೇ ಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಗೌಡ ಎಂಬವರ ಮನೆ ಬದಿ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿ ಜರಿದು ಬಿದ್ದಿದೆ.

ಪುದು ಗ್ರಾಮದ ಕೆಸನಮೊಗರು ಎಂಬಲ್ಲಿನ ಬಾಬು ಸಪಲ್ಯ ರವರ ಮನೆ ಮೇಲೆ ಮರಬಿದ್ದು ಗೋಡೆ ಹಾಗೂ ಹಂಚು ಹಾನಿಯಾಗಿದ್ದು, ಯಾವುದೇ ಜೀವ ಹಾನಿ ಯಾಗಿಲ್ಲ, ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ನಿವಾಸಿ ಬ್ರಿಜಿತ್ ಡಿಕೋಸ್ಟ ಅವರ ಮನೆಗೆ ಹೊಂದಿರುವ ಸಂಪೂರ್ಣ ಹಟ್ಟಿ ಹಾನಿಗೊಂಡಿದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ಎಂಬಲ್ಲಿನ ಭಾಸ್ಕರ ನಲಿಕೆ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿರುತ್ತದೆ.ಘಟನಾ ಸ್ಥಳಗಳಿಗೆ ಸ್ಥಳೀಯ ಕಂದಾಯಾಧಿಕಾರಿಗಳು ಭೇಟಿ ನೀಡಿ ನಷ್ಟದ ಬಗ್ಗೆ ಪರಿಶೀಲಿಸಿ,ವರದಿಯನ್ನು ತಾಲೂಕಾಡಳಿತಕ್ಕೆ ಸಲ್ಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಮೊಗರು ಶಾಲಾ ಬಳಿ ಬಿರುಗಾಳಿಗೆ ಮರಗಳು ರಸ್ತೆಗೆ ಉರುಳಿ ಬಿದ್ದ ಘಟನೆಯು ಮಂಗಳವಾರ ಸಂಜೆ ನಡೆದಿದೆ.

ಮೂರು ಅಕೇಶಿಯಾ ಮರಗಳು ಬುಡ ಸಹಿತ ಉರುಳಿ ಬಿದ್ದ ಪರಿಣಾಮ ನಡುಮೊಗರು-ಅಜಿಲಮೊಗರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಅದಾಗಲೇ ಶಾಲೆ ಬಿಟ್ಟಿದ್ದರಿಂದ ರಸ್ತೆಯಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ. ಸನಿಹ ವಿದ್ಯುತ್ ಕಂಬಗಳಿದ್ದರೂ ಅದಕ್ಕೆ ಹಾನಿಯಾಗದಿರುವುದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಆದಂಕುಂಞಿ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಿದರು.