ಮಹಿಳೆಯರು ಆಡಳಿತ ವ್ಯವಸ್ಥೆಯಲ್ಲಿ ನಾಯಕರಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ; ತಹಶೀಲ್ದಾರ್ ಡಿ.ಅರ್ಚನಾ ಭಟ್
ಬಂಟ್ವಾಳ : ಮಹಿಳೆಯರು ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಮನೆಯಲ್ಲಿ ಯಜಮಾನಿಯಾಗಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಆಡಳಿತ ವ್ಯವಸ್ಥೆಯಲ್ಲಿ ನಾಯಕರಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಹೇಳಿದ್ದಾರೆ.
ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ನಡೆದ ಬಂಟ್ವಾಳ ಹಾಗೂ ಉಳ್ಳಾಲ ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಆಡಳಿತ ವ್ಯವಸ್ಥೆಯ ಸವಾಲುಗಳನ್ನು ಎದುರಿಸಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಹಿಳೆಯರಿಂದಾಗಬೇಕು ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷೆ ಶಕೀಲ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಲಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ರವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಲ್ಯ ವಿವಾಹ , ಅಪೌಷ್ಟಿಕತೆ , ಹಾಗೂ ಬಾಲ ಕಾರ್ಮಿಕ ಪದ್ಧತಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವುದು, ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರುಗಳು ಕಟ್ಟಿಬದ್ಧರಾಗಬೇಕು ಎಂದರು.
ಜಿಲ್ಲಾ ಸ್ವಚ್ಛತಾರಾಯಬಾರಿ ಶೀನಶೆಟ್ಟಿ ಮಾತನಾಡಿ, ಪ್ರತಿ ಗ್ರಾಮವನ್ನು ಸಂಪೂರ್ಣ ಸ್ವಚ್ಛ ಸೋಲಾರ್ ಹಸಿರು ಗ್ರಾಮವನ್ನಾಗಿ ಪರಿವರ್ತಿಸಲು ಪ್ರತಿ ಸದಸ್ಯರು, ಇಲಾಖಾಧಿಕಾರಿಗಳು ಪ್ರಯತ್ನಿಸಬೇಕು, ಗ್ರಾಮ ಪಂಚಾಯತ್ ನಲ್ಲಾಗುವ ಕೆಲಸಗಳು ಮಧ್ಯವರ್ತಿಗಳಿಲ್ಲದೆ ನೇರ ಫಲಾನುಭವಿ ಹಾಗೂ ವ್ಯವಸ್ಥೆಯ ನಡುವೆ ಆಗುವಂತೆ ನೋಡಿಕೊಳ್ಳಲು ಗ್ರಾಮ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು.
9/11ನ್ನು ಈ ಹಿಂದಿನಂತೆ ಗ್ರಾಮ ಪಂಚಾಯತ್ ನಲ್ಲೇ ನೀಡಬೇಕು, ಪಡಿತರದಲ್ಲಿ ತಿದ್ದುಪಡಿ ಹಾಗೂ ಹೊಸ ಪಡಿತರಕ್ಕೆ ಅವಕಾಶ ಮಾಡಿಕೊಡುವಂತೆ ಸರಕಾರಕ್ಕೆ ಗ್ರಾಮ ಸಂಘದ ಮೂಲಕ ಮನವಿ ಮಾಡಲು ತೀರ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಬಂಟ್ವಾಳ ಹಾಗೂ ಉಳ್ಳಾಲ ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ನ ಚುನಾಯಿತ ಮಹಿಳಾ ಸದಸ್ಯರು, ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಕೃಷ್ಣ ಮೂಲ್ಯ, ಭಾಗವಹಿಸಿದ್ದರು.
ಬಂಟ್ವಾಳ ಸಾಂತ್ವನ ಕೇಂದ್ರದ ಸಮೋಲೋಚಕರು ಹಾಗೂ ಸಮಾಜಿಕ ಕಾರ್ಯಕರ್ತರು ಸಾಂತ್ವನ ಹಾಗೂ ಮಹಿಳಾ ಸಹಾಯವಾಣಿ ಸೇವೆಗಳ ಬಗ್ಗೆ ತಿಳಿಸಿದರು.ಸುಗ್ರಾಮ ಸಂಯೋಜಕ ಚೇತನ್ ಕಾರ್ಯಕ್ರಮ ಸಂಯೋಜಿಸಿದರು. ಕ್ಷೇತ್ರ ಸಂಘಟಕಿ ಕಾವೇರಿ ಸಹಕರಿಸಿದರು. ಸುಗ್ರಾಮ ಸಂಘದ ಕಾರ್ಯದರ್ಶಿ ವಿಜಯ ವಂದಿಸಿದರು.