ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೆ ಕಾಂಗ್ರೇಸ್ ಗೆ ಬೆಂಬಲ: ರೈ ವಿಶ್ವಾಸ
ಬಂಟ್ವಾಳ: ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸಂಸದರಿದ್ದ ಕಾಲದಲ್ಲಿ ದ.ಕ.ಜಿಲ್ಲೆ ಸಾಕಷ್ಟು ಅಭಿವೃದ್ಧಿ ಯಾಗಿದ್ದು, ಈ ಬಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೆ ಕಾಂಗ್ರೇಸ್ ಪಕ್ಷದ ಕೈ ಹಿಡಿಯುತ್ತಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ಮತಯಾಚಿಸುತ್ತಿದೆ ಎಂದರು.ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಬಹುತೇಕ ಕಾಂಗ್ರೆಸ್ ನ ಅವಧಿಯಲ್ಲಿ ನಡೆದಿವೆ, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ಜನರಿಗೆ ತಲುಪಿದ ಹಿನ್ನಲೆಯಲ್ಲಿ ಮತಯಾಚನೆಯ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ,ಇದರಿಂದ ಸಮಾಧಾನ ತಂದಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಈಗಾಗಲೇ ಪಕ್ಷ ಘೋಷಿಸಿರುವ ಗ್ಯಾರಂಟಿಯು ಜಾರಿಯಾಗಲಿದೆ ಎಂದು ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ಮತವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮರಳಿಪಡೆಯುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ದ.ಕ.ಜಿಲ್ಲೆಗೆ ಸಮರ್ಥ,ಕ್ರಿಯಾಶೀಲ ವ್ಯಕ್ತಿತ್ವದ,ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗಮನಸೆಳೆದಿರುವ ಯುವನ್ಯಾಯವಾದಿ ಪದ್ಮರಾಜ್ ಆರ್ ಪೂಜಾರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.ಜನತೆ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಪಕ್ಷದ ಕಾರ್ಯಕರ್ತರಿಂದ ಬೈಕ್ ಜಾಥ:
ಬುಧವಾರ ಮೆಲ್ಕಾರ್ ನಿಂದ ಸಜೀಪಮುನ್ನೂರಿನ ಸುಭಾಸ್ ನಗರದವರೆಗೆ ಪಕ್ಷದ ಕಾರ್ಯಕರ್ತರಿಂದ ಬೈಕ್ ಜಾಥ ನಡೆಯಲಿದೆ ಎಂದು ಅವರು ತಿಳಿಸಿದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿಕುಂದರ್, ಪಕ್ಷದ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್ ರೋಡ್ರಿಗಸ್, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲಿಯಾನ್, ಶಬೀರ್ ಸಿದ್ದಕಟ್ಟೆ, ವೆಂಕಪ್ಪ ಪೂಜಾರಿ ಮೊದಲಾದವರಿದ್ದರು.