ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ‘ಪುನರ್ ಪ್ರತಿಷ್ಠೆ’ ಹಾಗೂ ‘ಬ್ರಹ್ಮಕಲಶದ ಪುಣೋತ್ಸವ’
ಕೈಕಂಬ: ಮಂಗಳೂರು ತಾಲೂಕಿನ ಜೋಗಿ ಮಠ ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ, ಶ್ರೀ ರಾಜರಾಜೇಶ್ವರ ತಪೋನಿಧಿ ಶ್ರೀ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜಿ ಮಠಾಧೀಶರ ಮಾರ್ಗದರ್ಶನದಲ್ಲಿ ಪದ್ಮವಿಭೂಷಣ ಡಾ||ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಬ್ರಹ್ಮಶ್ರೀ ವೇದ ವಿದ್ವಾನ್ ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ, ವಾಸ್ತು ಶಿಲ್ಪಿ ಮಹೇಶ್ ಮುನಿಯoಗಳ ಮತ್ತು ಕ್ಷೇತ್ರದ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ ಉಪಸ್ಥಿತಿಯಲ್ಲಿ ಫೆಬ್ರವರಿ 20 ರ ಮಂಗಳವಾರದಿಂದ 26 ಸೋಮವಾರದವರೆಗೆ ಶ್ರೀ ಕಾಲಭೈರವ, ಶ್ರೀ ಮಂಜುನಾಥೇಶ್ವರ, ಶ್ರೀ ಜ್ವಾಲಾ ಮಹಾಮ್ಮಾಯಿ ಮತ್ತು ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ‘ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ಪುಣೋತ್ಸವ’ವು ನಡೆಯಲಿದೆ.

ಸೋಮವಾರ ಅಪರಾಹ್ನ 2:30ಕ್ಕೆ ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ.
ಕುಕ್ಕೆ, ಕೊಲ್ಲೂರು ಸೇರಿದಂತೆ ಒಟ್ಟು 8 ದೇವಸ್ಥಾನಗಳಿಂದ ಹೊರೆ ಕಾಣಿಕೆ ಸಮರ್ಪಣೆಯಾಗಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು ಮಾಹಿತಿ ನೀಡಿದ್ದಾರೆ.
ಭಾನುವಾರ ದೇವಸ್ಥಾನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಅಂದಾಜು 2 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ನಡೆಸಲಾಗಿದ್ದು, ದೇವರ ಕೆರೆಯ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿದೆ. ಕೆರೆ ಅಭಿವೃದ್ಧಿಗಾಗಿ ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ದಾನಿಗಳ ಮತ್ತು ಭಕ್ತರ ಸಹಕಾರದಲ್ಲಿ ಜೀರ್ಣೋದ್ದಾರವಾಗಿದೆ. ಜೀರ್ಣೋದ್ದಾರಕ್ಕೆ ಅಗತ್ಯವಾದ ಜಾಗವನ್ನು ಪೂವಪ್ಪ ಪೂಜಾರಿ ಮತ್ತು ಮಕ್ಕಳು ನೀಡಿದ್ದಾರೆ. ಬ್ರಹ್ಮ ಕಲಶದ ದಿನ ಅಂದಾಜು 5000 ಜನ ಸೇರುವ ನಿರೀಕ್ಷೆ ಇದೆ ಎಂದರು.
ನಾಥ ಪಂಥಕ್ಕೆ ಸೇರಿದ ಕದ್ರಿ ಮಠ ಮೊದಲನೆಯದಾಗಿದ್ದು, ಮಟ್ಟಿಯ ಜೋಗಿ ಮಠ ಎರಡನೇ ಪ್ರಮುಖ ಮಠವಾಗಿದೆ. ಪುರಾತನ ಕಾಲದಲ್ಲಿ ನಾಥ ಪಂಥದ ಯೋಗಿಗಳು ಕುದುರೆಗಳಲ್ಲಿ ಇಲ್ಲಿಗೆ ಬಂದು ಈ ದೇವಸ್ಥಾನವನ್ನು ನಿರ್ಮಿಸಿದ ಬಗ್ಗೆ ಶಿಲಾ ಶಾಸನ ಹಾಗೂ ಕುದುರೆಗಳಿಗೆ ನೀರು ಕುಡಿಯಲೆಂದು ಕಲ್ಲಿನಲ್ಲಿ ನಿರ್ಮಿಸಲಾದ ಮರಿಗೆ ಇಲ್ಲಿನ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಮಟ್ಟಿಯ ಮಂಜುನಾಥ ಭಕ್ತರ ಅಭಿಲಾಷೆಯನ್ನು ಈಡೇರಿಸುತ್ತಿದ್ದು, ಇಲ್ಲಿ ನೆಲೆಯಾಗಿರುವ ಭೈರವ ದೇವರಿಗೆ ರೂಟ್ ಪೂಜೆಯ ಸೇವೆ ವಿಶೇಷವಾಗಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ್ ಜೋಗಿ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್ ಮಾಹಿತಿ ನೀಡಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ, ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಗಂಗಾಧರ್ ಭಂಡಾರಿ, ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ನಾರಳ, ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ಸೋಹನ್ ಅತಿಕಾರಿ ಹಾಗೂ ಉಪಾಧ್ಯಕ್ಷ ಸುನಿಲ್ ಗಂಜಿಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು: 20ರ ಮಂಗಳವಾರ ಬೆಳಿಗ್ಗೆ ತಂತ್ರಿವರೆಣ್ಯರ ಆಗಮನ, ಉಗ್ರಾಣ ಮುಹೂರ್ತ, ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ, ಭಜನಾ ಸಂಕೀರ್ತನೆ, ಅಪರಾಹ್ನ 2:30ರಿಂದ ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ, ಸಂಜೆ 5:30ರಿಂದ ಕಟೀಲು ಮೇಳದವರಿಂದ ಪಂಚ ಕಲ್ಯಾಣ ಯಕ್ಷಗಾನ ಬಯಲಾಟ.
21ರ ಬುಧವಾರ ಬೆಳಿಗ್ಗೆ ಪ್ರತಿಷ್ಠಾ ಪ್ರಧಾನ ಹೋಮ, 11:37 ವೃಷಭ ಲಗ್ನದಲ್ಲಿ ಶ್ರೀ ಮಂಜುನಾಥ, ಶ್ರೀ ಕಾಲಭೈರವ ಶ್ರೀ ಜ್ವಾಲಾ ಮಹಮ್ಮಾಯಿ ದೇವರಿಗೆ ಅಷ್ಟ ಬಂಧ ಪ್ರತಿಷ್ಠೆ, ಲೇಪನ ಪ್ರೊಕ್ಷ, ಕಲಶಾಭಿಷೇಕ, ತತ್ವ ಹೋಮ. ಸಂಜೆ 4:30÷ರಿಂದ ಧಾರ್ಮಿಕ ಸಭೆ, 6:30ರಿಂದ ಮನೋರಂಜನಾ ಕಾರ್ಯಕ್ರಮಗಳು.
22ರ ಗುರುವಾರ ಬೆಳಿಗ್ಗೆ ಮಹಾರುದ್ರ ಯಾಗ, ಪ್ರತಿಷ್ಠಾ ಹೋಮ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ, ಸಂಜೆ 6 ಗೆ ನಾಗತನು, ತರ್ಪಣ ಸೇವೆ, ಮಲರಾಯ ಅಣ್ಣಪ್ಪ ಸಾನಿಧ್ಯದಲ್ಲಿ ವಾಸ್ತು ರಕ್ಷೋಘ್ನ ಹೋಮಗಳು, ಸಂಜೆ 4:30ಕ್ಕೆ ಧಾರ್ಮಿಕ ಸಭೆ. ಸಂಜೆ 6:30ಕ್ಕೆ ಯಕ್ಷಗಾನ ಬಯಲಾಟ ಗರೋಡಿದ ಸತ್ಯೊಲು.
23 ರ ಶುಕ್ರವಾರ 730ರಿಂದ ಮಲರಾಯ ಬಂಟ, ಅಣ್ಣಪ್ಪ ಪಂಜುರ್ಲಿ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಕಲ್ಲುರ್ಟಿ-ಪಂಜುರ್ಲಿ ದೈವಗಳ ಕಲಶಾಭಿಷೇಕ, ಕಾಲ ಭೈರವ ಹಾಗೂ ಜ್ವಾಲಾ ಮಹಮ್ಮಾಯಿ ದೇವರಿಗೆ ಬ್ರಹ್ಮ ಕಲಶಾಭಿಷೇಕ, ಚಂಡಿಕಾ ಯಾಗ, ಅಷ್ಟ ಭೈರವ ಯಾಗ, ಭಜನಾ ಸಂಕೀರ್ತನೆ,ಸಂಜೆ 4ರಿಂದ ಧಾರ್ಮಿಕ ಸಭೆ. ಸಾಂಸ್ಕೃತಿಕ ಕಾರ್ಯಕ್ರಮಗಳು.
24ರ ಶನಿವಾರ ಬೆಳಿಗ್ಗೆ 6ರಿಂದ ಗೋಪೂಜೆ, ಕವಾಟೋದ್ಘಾಟನೆ. ಬೆಳಿಗ್ಗೆ 11:20ರಿಂದ ಮೇಷ ಲಗ್ನದಲ್ಲಿ ಮಂಜುನಾಥ ದೇವರಿಗೆ ಬ್ರಹ್ಮ ಕಲಶಾಭಿಷೇಕ ಪುಣ್ಯೋತ್ಸವ, ಸಂಜೆ 5:30ಕ್ಕೆ ಧಾರ್ಮಿಕ ಸಭೆ. ಸಾಂಸ್ಕೃತಿಕ ಕಾರ್ಯಕ್ರಮಗಳು.
25ರ ಭಾನುವಾರ ಬೆಳಿಗ್ಗೆ 88ಕ್ಕೆ ಮಹಿಷoದಾಯ, ಅಣ್ಣಪ್ಪ ಪಂಜುರ್ಲಿ, ಮಲರಾಯ ಬಂಟ, ಮರಳು ಧೂಮಾವತಿ ಬಂಟ ದೈವಗಳ ಭಂಡಾರ ಆಗಮನ. ರಾತ್ರಿ 7:30ಕ್ಕೆ ಮಹಿಷoದಾಯ, ಅಣ್ಣಪ್ಪ ಪಂಜುರ್ಲಿ, ಮಲರಾಯ ಬಂಟ, ಮರಳು ಧೂಮಾವತಿ ಬಂಟ ದೈವಗಳಿಗೆ ನೇಮೋತ್ಸವ.
26ರ ಸೋಮವಾರ ರಾತ್ರಿ 8ಕ್ಕೆ ಕಲ್ಲುರ್ಟಿ ಪಂಜುರ್ಲಿ, ಗುಳಿಗ ದೈವಗಳಿಗೆ ಕೋಲ ಬಲಿ ಸೇವೆ.
ನಿರಂತರ ಭಜನಾ ಸಂಕೀರ್ತನೆ ಮತ್ತು ಅನ್ನ ಸಂತರ್ಪಣೆ ಸೇವೆ ನಡೆಯಲಿದೆ.