ರಾಮ ಮಂದಿರ ಉದ್ಘಾಟನೆ ಮಾಡಿದ್ದು ಮೋದಿ ಆದರೆ ಯಜಮಾನಿಕೆ ಯಾರದ್ದು?! ಅಯೋಧ್ಯಾ ರಾಮನ ಪ್ರತಿಷ್ಠೆಯನ್ನು ಕಣ್ಣಾರೆ ಕಂಡ ವಜ್ರದೇಹಿ ಶ್ರೀ ಹೇಳಿದ್ದೇನು?
ಕೈಕಂಬ: ಸುಮಾರು 500 ವರ್ಷಗಳ ಕಾಯುವಿಕೆಗೆ ಮಂಗಳ ಹಾಡಿದ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಪಟ್ಟಾಭಿಷೇಕದಂತೆ ನಡೆದ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಬಗ್ಗೆ ಬಂದಂತಹ ಹಲವು ಟೀಕೆ ಟಿಪ್ಪಣಿಗಳ ಬಗ್ಗೆ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮದಲ್ಲಿ ಪಾಲ್ಗೊಂಡ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಬಾಲ ರಾಮನ ಪ್ರತಿಷ್ಠೆಯಂದು ಅಯೋಧ್ಯೆಗೆ ಬರಲು ಅಹ್ವಾನ ಪಡೆದ ದಕ್ಷಿಣ ಕನ್ನಡದ ಏಕೈಕ ಸಂತ ವಜ್ರದೇಹಿ ಸ್ವಾಮೀಜಿಯವರ ಜತೆ ನಡೆಸಿದ ಕಿರು ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ಮಂದಿರ ಉದ್ಘಾಟನೆ ನಡೆಸಿದ್ದಕ್ಕೆ ಬಂದ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ಸಂದರ್ಶನದ ಆಯ್ದ ಭಾಗಗಳು:
ಪ್ರಧಾನ ಮಂತ್ರಿಗಳು ಉದ್ಘಾಟನೆ ಮಾಡಿದ್ದಕ್ಕೆ ಟೀಕೆಗಳ ಬಗ್ಗೆ?
ಸಂಸಾರ ಇಲ್ಲದ ಮೋದಿಯವರು ಸಂಸಾರ ಬಿಟ್ಟು ಹೋದ ರಾಮನ ಪ್ರತಿಷ್ಠೆ ಮಾಡಿದರು ಎಂದು ಹಲವರು ಟೀಕೆ ಮಾಡಿದರು ಆದರೆ ದಲಿತ, ಬುಡಕಟ್ಟು ಸಮುದಾಯ ಸೇರಿದಂತೆ ಹಿಂದೂ ಧರ್ಮದ ವಿವಿಧ ಸಮುದಾಯದ ಒಟ್ಟು ಹದಿನಾಲ್ಕು ಕುಟುಂಬಗಳಿಗೆ ಬಾಲ ರಾಮನ ಪ್ರತಿಷ್ಠೆಯ ಯಜಮಾನಿಕೆ ನೀಡಲಾಗಿತ್ತು.
ನಿಶದ ರಾಜ ಗುಹ ಮತ್ತು ಕಾಡಿನ ಶಬರಿಯನ್ನು ರಾಮ ಅನುಗ್ರಹ ಮಾಡಿದ್ದ. ರಾಮ ಉಚ್ಛ ಕುಲದವರಿಗೆ ಅನುಗ್ರಹ ಮಾಡಿದ ಯಾವುದೇ ಉದಾಹರಣೆ ಇಲ್ಲ. ಅವಕಾಶದಿಂದ ವಂಚಿತರಾದ ಜನರಿಗೆ ರಾಮ ಅನುಗ್ರಹ ಮಾಡಿದ್ದ ರೀತಿಯಲ್ಲಿಯೇ ಅಯೋಧ್ಯೆಯಲ್ಲೂ ಮಾಡಲಾಗಿದೆ.
ಮಂದಿರದ ಶಿಲಾನ್ಯಾಸ ಮಾಡಿದ್ದು ಓರ್ವ ದಲಿತ. ಮೋದಿಯವರು ದೇಶದ ಪ್ರಧಾನಿಯಾಗಿ ಈ ಮಂದಿರ ಸ್ಥಾಪನೆ, ಉದ್ಘಾಟನೆಯ ನೇತೃತ್ವ ವಹಿಸಿದ್ದರು. ಮೋದಿಯವರು ಬಾಲ ರಾಮನಿಗೆ ಆರತಿ ಮಾಡಿದ್ದನ್ನೇ ನೋಡಿ ಮೋದಿ ಉದ್ಘಾಟನೆ ಮಾಡಿದರು ಎನ್ನುತ್ತಿದ್ದಾರೆ. ಒಂದು ಕಟ್ಟಡಕ್ಕೆ ಅಡಿಪಾಯ ಹೇಗೂ ಹಾಗೆಯೇ ಇಡೀ ರಾಮ ಮಂದಿರ ನಿರ್ಮಾಣ ಮತ್ತು ಲೋಕಾರ್ಪಣೆಯ ನೇತೃತ್ವ ವಹಿಸಿದ್ದರು.
ಈ ಹಿಂದಿನ ಪ್ರಧಾನಿಗಳಿಗೆ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಯಾಕೆ?
ಶ್ರೀರಾಮ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತನ್ನ ಮಂದಿರವನ್ನು ಕಟ್ಟಿಸಿದ ಎಂಬುದನ್ನು ಅರಿತುಕೊಳ್ಳಬೇಕು.
ನರೇಂದ್ರ ಮೋದಿ ಉಪವಾಸದ ಬಗ್ಗೆ?
ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯದೆ ಮಾತನಾಡುವುದು ತಪ್ಪು ಮೋದಿಯವರ ಉಪವಾಸದ ಬಗ್ಗೆ ಹಲವರು ಮಾತನಾಡಿದ್ದಾರೆ. ಮೈ ಕೊರೆಯುವ 2ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಮಂದಸ್ಮಿತವಾಗಿ ಬರಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ ಕಠಿಣ ಸಾಧನೆ ಮತ್ತು ಮಾನಸಿಕ ಬಲದಿಂದ ಮಾತ್ರ ಸಾಧ್ಯ ಅದು ಮೋದಿಯವರಿಗೆ ಇದೆ ಅಂದ ಮೇಲೆ ಅವರಿಗೆ ಉಪವಾಸ ಮಾಡುವುದು ದೊಡ್ಡದಲ್ಲ.
ಮೋದಿಯವರ ಭಕ್ತಿ ತನ್ಮಯತೆ, ತಾದಾತ್ಮತೆ ಬೇರೆ ಯಾರಿಗೂ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಅರಿಯದೆ ಬಾಯಿಗೆ ಬಂದಂತೆ ಮಾತಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ.
ಹಿಂದಿನ ಮತ್ತು ಇಂದಿನ ಅಯೋಧ್ಯೆಯಲ್ಲಿ ಆದ ಬದಲಾವಣೆ?
ನಾನು 2002, 2012, 2016 ರಲ್ಲಿ ಅಯೋಧ್ಯೆಗೆ ಹೋಗಿದ್ದೆ ಆಗಿನ ಅಯೋಧ್ಯೆ 2024 ರಲ್ಲಿ ಹೋದಾಗ ಅದ್ಭುತ ಅಯೋಧ್ಯೆಯಾಗಿದೆ.
ಅಲ್ಲಿ ಪ್ರತಿಯೊಂದು ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಿಂದಿನ ಇಕ್ಕಟ್ಟಾದ ಓಣಿಗಳು, ಬೀದಿಗಳು ಇಂದು ವಿಶಾಲವಾದ ಸುಂದರವಾದ ರಾಜ ರಸ್ತೆಗಳಾಗಿವೆ. ಅಯೋಧ್ಯೆ ವಿಸ್ಮಯವಾಗಿದೆ, ಪರಿಶುದ್ಧವಾಗಿದೆ. ಈಗ 40 ಶೇಖಡಾ ಕೆಲಸಗಳು ಆಗಿವೆ ಇನ್ನೂ 60 ಶೇಖಡಾ ಬಾಕಿ ಇದೆ ಅದು ಪೂರ್ತಿಯಾದಾಗ ಅಯೋಧ್ಯೆ ಪರಿಪೂರ್ಣವಾಗಲಿದೆ.
ಮಂದಿರವನ್ನು ಅವಸರದಲ್ಲಿ ಚುನಾವಣೆಗಾಗಿ ಉದ್ಘಾಟನೆ ಮಾಡಲಾಗಿದೆ ಎಂಬ ಆರೋಪ?
ಬಲ್ಲವರು, ಅರಿತವರಿಗೆ ಯಾಕೆ ಮಂದಿರವನ್ನು ಉದ್ಘಾಟನೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ.
ಶೋಭಾಕೃತ್ ನಾಮ ಸಂವತ್ಸರದಲ್ಲಿ ಎರಡು ನಾಮ ನವಮಿ ಬರುತ್ತದೆ. ಮುಂದೆ ಬರುವುದು ಕ್ರೋಧಿ ನಾಮ ಸಂವತ್ಸರ ಅದರಲ್ಲಿ ರಾಮ ನವಮಿ ಬರುವುದಿಲ್ಲ. ಶಾಸ್ತ್ರ ತಜ್ಞರು ಅಧ್ಯಯನ ಮಾಡಿ ರಾಮ ನವಮಿ ಯಾವ ಸಂವತ್ಸರದಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಂಡು ಮಾಡಿದ್ದಾಗಿದೆ.
ರಾಮ ನವಮಿ ಇಲ್ಲದ ಸಂವತ್ಸರದಲ್ಲಿ ರಾಮ ಹೇಗೆ ಪ್ರತಿಷ್ಠೆಯಾಗಲು ಸಾಧ್ಯ? ಇದನ್ನೆಲ್ಲಾ ಅರಿಯದವರು ಮಾತ್ರ ಟೀಕಿಸಲು ಸಾಧ್ಯ ಎಂದು ಖೇದ ವ್ಯಕ್ತಪಡಿಸಿದ ಶ್ರೀಗಳು ಯಾವತ್ತೂ ಇರದ ಮೂರು ಗಿಡುಗ ಪಕ್ಷಿಗಳು ಪ್ರತಿಷ್ಠೆಯ ದಿನ 12:22 ನಿಮಿಷಕ್ಕೆ ಸರಿಯಾಗಿ ಮಂದಿರದ ಮೇಲೆ ಬಂದು ಮಂದಿರಕ್ಕೆ ಮೂರು ಸುತ್ತು ಹಾಕಿ ಹೋಗಿವೆ. ಅವುಗಳಿಗೆ ಅಹ್ವಾನ ಕೊಟ್ಟವರಾರು? ಮೂರೇ ಸುತ್ತು ಬರುವಂತೆ ಹೇಳಿದವರಾರು? ಎಷ್ಟೋ ದಿನಗಳ ಕಾಲ ಮೋಡ ಆವರಿಸಿ ಸೂರ್ಯನನ್ನೇ ಕಾಣದ ಅಯೋಧ್ಯೆಯಲ್ಲಿ ಪ್ರತಿಷ್ಠೆಯ ದಿನ ಬೆಳಿಗ್ಗೆ 9ರಿಂದ ಸಂಜೆವರೆಗೂ ಸುಡು ಬಿಸಿಲು ಇರಲು ಹೇಗೆ ಸಾಧ್ಯ?
ಹಲವು ಕಾಲದಿಂದ ಅಯೋಧ್ಯೆಯಲ್ಲಿ ಕಾಣ ಸಿಗದಿದ್ದ ಕೋತಿಗಳ ಹಿಂಡು ಪ್ರತಿಷ್ಠೆಯ ದಿನ ಅಯೋಧ್ಯೆಗೆ ಬರಲು ಅಹ್ವಾನ ಕೊಟ್ಟವರಾರು? ಬನ್ನಿ ಎಂದು ಅಹ್ವಾನ ಕೊಟ್ಟರೂ ತಿರಸ್ಕರಿಸಿದವರಿಗೆ ರಾಮನನ್ನು ಕಾಣುವ ಯೋಗ ಇಲ್ಲ ಎಂದು ಶ್ರೀಗಳು ಹೇಳಿದರು.