ಬಿಜೆಪಿ ಬಂಟ್ವಾಳ ಮಂಡಲಕ್ಕೆ ಕೋಟ್ಯಾನ್ ನೂತನ ಸಾರಥಿ
ಬಂಟ್ವಾಳ:ದ.ಕ.ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರು ಜಿಲ್ಲೆಯ ವಿವಿಧ ಮಂಡಲಗಳಿಗೆ ನೂತನ ಅಧ್ಯಕ್ಷರ ಪಟ್ಟಿಯನ್ನು ಪ್ರಕಟಿಸಿದ್ದು,ಬಿಜೆಪಿ ಬಂಟ್ವಾಳ ಮಂಡಲಕ್ಕೆ ಜಿ.ಪಂ. ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಗಿದೆ.
ಇದರೊಂದಿಗೆ ಅವರು ಎರಡನೇ ಬಾರಿಗೆ ಬಿಜೆಪಿಯ ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಆರ್.ಎಸ್. ಎಸ್. ಸಕ್ರಿಯ ಕಾರ್ಯಕರ್ತನಾಗಿರುವ ಚೆನ್ನಪ್ಪ ಕೋಟ್ಯಾನ್ ಅವರು ಒಂದು ಬಾರಿ ಜಿ.ಪಂ.ಸದಸ್ಯರಾಗಿಯು ಸೇವೆ ಸಲ್ಲಿಸಿದ್ದರು.
ಪಕ್ಷದ ಮಂಡಲದ ಪ್ರ.ಕಾರ್ಯದರ್ಶಿಯಾಗಿಯು ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅವರು ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತನಾಗಿಯು ಗುರುತಿಸಿದ್ದರು.
ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷರಾಗಿ, ಪೂರ್ಲಿಪಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಮಹಮ್ಮಾಯಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ, ಶ್ರೀ ರಾಮವಿದ್ಯಾಕೇಂದ್ರದ ಅಡಳಿತ ಮಂಡಳಿಯ ಸದಸ್ಯರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.
1990ರಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದರು.ಬಿಜೆಪಿ ಬಂಟ್ವಾಳ ಮಂಡಲಕ್ಕೆ ಹೊಸಮುಖಕ್ಕೆ ಅಧ್ಯಕ್ಷ ಹುದ್ದೆ ದೊರೆಯುವ ನಿರೀಕ್ಷೆಯನ್ನು ಸಕ್ರಿಯ ಕಾರ್ಯಕರ್ತರು ಹೊಂದಿದ್ದರಲ್ಲದೆ ಹಲವರ ಹೆಸರು ಕೂಡ ಚಾಲ್ತಿಯಲ್ಲಿತ್ತು.ಆದರೆ ಹಿರಿಯ,ಅನುಭವಿಯಾದ ಚೆನ್ನಪ್ಪ ಕೋಟ್ಯಾನ್ ಅವರನ್ನು ಅಧ್ಯಕ್ಷರನ್ನಾಗಿ ಪಕ್ಷ ಆಯ್ಕೆ ಮಾಡಿದೆ.
ಬಂಟ್ವಾಳ ಮಂಡಲದ ನೂತನ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಅವರಿಗೆ ಶಾಸಕ ರಾಜೇಶ್ ನಾಯ್ಕ್ ಅವರು ಅಭಿನಂದಿಸಿದ್ದಾರೆ.
ಬಂಟ್ವಾಳದ ಇಬ್ಬರಿಗೆ ಕಾರ್ಯದರ್ಶಿ :
ಬಂಟ್ವಾಳ ಮಂಡಲದ ಹಾಲಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಬಂಟ್ವಾಳ ತಾ.ಪಂ.ನ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅವರಿಬ್ಬರನ್ನು ದ.ಕ.ಜಿಲ್ಲಾ ಬಿಜೆಪಿಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.