Published On: Tue, Dec 19th, 2023

ಒಗ್ಗಟ್ಟಿನಿಂದ ದುಡಿದಾಗ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗುವುದರಲ್ಲಿ ಸಂದೇಹವಿಲ್ಲ: ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು

ಬಂಟ್ವಾಳ: ಬಂಟ್ವಾಳ ಯಾವುದೇ ಸಂಸ್ಥೆಯ ಏಳಿಗೆಗೆ ಹಲವಾರು ಕೈಗಳು ಸೇರಿದಾಗ ಅಭಿವೃದ್ಧಿ ಸಾಧ್ಯ. ಜಾತಿ, ಧರ್ಮ, ಭೇದವಿಲ್ಲದೆ ಒಟ್ಟಾಗಿ ದುಡಿದಾಗ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಸಂದೇಹವಿಲ್ಲ ಎಂದು ಸುರತ್ಕಲ್ ಮಾತಾ ಡೆವಲಪರ್ಸ್  ಮ್ಯಾನೇಜಿಂಗ್ ಡೈರೆಕ್ಟರ್ ಎನ್. ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಒದಗಿಸಿದ ಮುಂಬೈ ಟಾಟಾ ಸಂಸ್ಥೆಯ‌ ಆಡಳಿತ ವಿಭಾಗದ ಉಪಾಧ್ಯಕ್ಷ ಸುಧೀರ್ ಸಾಗರ್ ಶಾಲೆಯ ವತಿಯಿಂದ ಗೌರವವನ್ನು ಸ್ವೀಕರಿಸಿ ಮಾತನಾಡಿ ಪುಸ್ತಕಕ್ಕಿಂತ ಜೀವನದ ಪಾಠ ದೊಡ್ಡದು, ಮಜಿ ಶಾಲಾ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ತನ್ನ ಸಂಸ್ಥೆಯ ಮೂಲಕ ಸಹಕಾರ ನೀಡಲಾಗುವುದು ಎಂದರು.‌

ಇದೇ ವೇಳೆ ಶಾಲಾಭಿವೃದ್ಧಿಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಸಂಜೀವ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಗ್ರಾಂ. ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ಹಿರಿಯ ವಿದ್ಯಾರ್ಥಿ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ನೇತೃತ್ವದಲ್ಲಿ ನಿರ್ಮಿಸಲಾದ ಕೈ ತೊಳೆಯುವ ಘಟಕ, ಗ್ರಾಮ ಪಂಚಾಯತ್ ನ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ದ್ರವ ತ್ಯಾಜ್ಯ ಘಟಕ, ಕುಸುಮಾವತಿ ಶೆಟ್ಟಿ ಮಜಿ ಕೊಡುಗೆಯಾಗಿ ನೀಡಿದ ಬ್ಯಾಂಡ್ ಸೆಟ್,  ರೋಟರಿ ಕ್ಲಬ್ ಬಂಟ್ವಾಳ ಸಿಟಿ ವತಿಯಿಂದ ಪೂರ್ವ ಪ್ರಾಥಮಿಕ ತರಗತಿಗಳಿಗೆ ನೀಡಿದ 10 ಟೇಬಲ್ ಹಾಗೂ 50 ಸ್ಟೂಲ್, ಯತಿನ್ ಕೊಂಬಿಲ ಒದಗಿಸಿದ ಪ್ರಿಂಟರ್, ರಾಮಚಂದ್ರ ಪೂಜಾರಿ ಪಾದೆ ಒದಗಿಸಿದ 25 ಲೀಟರ್ ಕುಕ್ಕರ್, ಲೋಕಯ ನಾಯ್ಕ್ ಕಿನ್ನಿಮೂಲೆ ಒದಗಿಸಿದ ಮರದ ಟೀಪಾಯಿ ಮೊದಲಾದ ಸಾಮಾಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.

ಶಾಲೆಗೆ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳ ಸಾಹಿತ್ಯ ಸಂಘದ ಮೂಲಕ ಹೊರ ತಂದ ಹಸ್ತ ಪತ್ರಿಕೆ “ಮನಸು” ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಅವರು ಅಧ್ಯಕ್ಷತೆ ವಹಿಸಿದ್ದರು.                      
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಜನಾರ್ಧನ ಪೂಜಾರಿ, ಸದಸ್ಯರುಗಳಾದ  ಜಯಂತಿ,  ಗೀತಾ ಜೆ ಗಾಂಭೀರ್,  ಮೀನಾಕ್ಷಿ, ಲಕ್ಷ್ಮಿ, ದಿನೇಶ್, ನಿಶಾಂತ್ ರೈ, ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ರೋಟರಿ ಕ್ಲಬ್ ಬಂಟ್ವಾಳ ಸಿಟಿ ಪ್ರತಿನಿಧಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ ಉಪಸ್ಥಿತರಿದ್ದರು.

ಬಳಿಕ  ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.    
ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯ ಶಿಕ್ಷಕಿ  ಬೆನಡಿಕ್ಟ ಆಗ್ನೇಸ್ ಮಂಡೋನ್ಸ  ಸ್ವಾಗತಿಸಿದರು‌. ಶಿಕ್ಷಕಿ ಮುಷಿ೯ದ  ಬಾನು ವರದಿ ವಾಚಿಸಿದರು, ಶಿಕ್ಷಕಿಯರಾದ ಅನುಷಾ ಹಾಗೂ ಸಂಪ್ರಿಯ ಸನ್ಮಾನ ಪತ್ರವನ್ನು ವಾಚಿಸಿದರು.

ಶಿಕ್ಷಕಿ ಮಮತಾ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿ  ಶಕುಂತಲಾ ಎಂ.ಬಿ ವಂದಿಸಿದರು,
ಶಿಕ್ಷಕಿ ಸಂಗೀತ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಭಿವೃದ್ಧಿಯ ಸಮಿತಿಯ ಸದಸ್ಯರು, ಶಿಕ್ಷಕಿಯರಾದ ಜಯಲಕ್ಷ್ಮಿ, ಹರಿಣಾಕ್ಷಿ, ಜಯಚಿತ್ರ, ಮಮತಾ, ಪಲ್ಲವಿ, ಹೇಮಲತಾ, ಮೀನಾಕ್ಷಿ ಸಹಕರಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter