ಗುರುಪುರ ಕರಾವಳಿ ಜೋಡುಕರೆ ಕಂಬಳದ ಲೋಗೊ ಬಿಡುಗಡೆ
ಕೈಕಂಬ: ಎಪ್ರಿಲ್ 2024ರಲ್ಲಿ ಪ್ರಥಮ ಬಾರಿ ಗುರುಪುರದಲ್ಲಿ ನಡೆಯಲಿರುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್(ರಿ) ಗುರುಪುರ ಇದರ ನೂತನ ಲೋಗೊ ಬಿಡುಗಡೆಯು ಮಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಡೆಯಿತು.
ಕಂಬಳ ಸಮಿತಿಯ ಗೌರವಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಲೋಗೊ ಅನಾವರಣಗೊಳಿಸಿ ಮಾತನಾಡಿ, ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿ ಎಲ್ಲೆಡೆ ಪಸರಿಸಲಿ. ಸರ್ವ ಧರ್ಮ ಸಮನ್ವಯ ಕಂಬಳವಾಗಿ ಇತಿಹಾಸ ಸೃಷ್ಟಿಸಲಿ ಎಂದು ಹಾರೈಸಿದರು.
ಟ್ರಸ್ಟ್ ನ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಬೆಂಗಳೂರಿನ ಕಂಬಳಕ್ಕಿಂತಲೂ ಹೆಚ್ಚು ಸಂಭ್ರಮದಿಂದ ನಡೆಸಲಿಚ್ಛಿಸುರುವ ಗುರುಪುರ ಕಂಬಳಕ್ಕೆ ಸರ್ವ ಧರ್ಮೀಯರ ಸಹಕಾರ ಅತ್ಯಗತ್ಯ. ಇಲ್ಲಿನ ಕಂಬಳ ಜನಪದ ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕತೆ ಹಿನ್ನೆಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದರು.
ಅಂತರಾಷ್ಟ್ರೀಯ ಕಾರ್ ರೇಸಿಂಗ್ ಕ್ರೀಡಾಳು ಅಶ್ವಿನ್ ನಾಯ್ಕ್ ಮಾತನಾಡಿ, ತುಳುನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ, ಉಮೇಶ್ ರೈ ಪದವು ಮೇಗಿನಮನೆ, ಟ್ರಸ್ಟ್ ಪದಾಧಿಕಾರಿ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ ಮಾತನಾಡಿದರು.
ಗುರುಪುರ ಕರಾವಳಿ ಜೋಡುಕರೆ ಕಂಬಳ ಸಮಿತಿಯ ಸದಸ್ಯರಾದ ಹರೀಶ್ ಭಂಡಾರಿ, ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು ಗುತ್ತು, ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಎ. ಕೆ. ಅಶ್ರಫ್, ಕಾಂಗ್ರೆಸ್ ಯುವ ನಾಯಕ ಗಿರೀಶ್ ಆಳ್ವ, ತಾ.ಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ಯಶವಂತ ಶೆಟ್ಟಿ ಬೆಳ್ಳೂರು ಗುತ್ತು, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ಜಗದೀಶ ಆಳ್ವ, ಸುಧಾಕರ ಶೆಟ್ಟಿ ದೋಣಿಂಜೆಗುತ್ತು ಮತ್ತಿತರರು ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಮಂಜನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.