ಗೋದಾಮಿನಿಂದ ಪಡಿತರ ಅಕ್ಕಿ ಕಾಣೆ ಪ್ರಕರಣ ಮತ್ತೆ ಮುನ್ನಲೆಗೆ; ಉನ್ನತ ಮಟ್ಟದ ತನಿಖೆಗೆ ಬಂಗೇರ ಆಗ್ರಹ
ಬಂಟ್ವಾಳ: ಕಳೆದ ಆಗಸ್ಟ್ ನಲ್ಲಿ ಬಿ.ಸಿ.ರೋಡಿಗೆ ಸಮೀಪದ ಪೊನ್ನೊಡಿಯ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಹಂಚಿಕೆಯಾಗುವ ಕೋಟ್ಯಾಂತರ ರೂ ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿ ಕಳವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹ ಕೆರಳಿ ಬರುವ ಮೂಲಕ ಮತ್ತೆ ಮುನ್ನಲೆಗೆ ಬಂದಿದೆ.
ಜಿ.ಪಂ.ನ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅಕ್ಕಿ ಕಳವು ಪ್ರಕರಣದಲ್ಲಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಾರ್ವಜನಿಕರಲ್ಲಿ ಶಂಕೆ ಇದ್ದು, ಈ ಪ್ರಕರಣದ ಸಿಒಡಿಯಿಂದ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ಜಾಲವನ್ನು ಬೇಧಿಸಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪೊನ್ನೋಡಿಯ ಸಂಗ್ರಹಣಾ ಗೋದಾಮಿನಿಂದ ಸುಮಾರು1.32 ಕೋಟಿ ರೂ. ಮೌಲ್ಯದ 3850 ಕಿಂಟ್ವಾಲ್ ಅಕ್ಕಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಂದು ಪ್ರಕರಣ ದಾಖಲಾಗಿತ್ತು.
ಮರುದಿನ ಜಿಲ್ಲಾಧಿಕಾರಿ ಸಹಿತ ಕೆಲ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸುವ ನಾಟಕವಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಆಹಾರ ನಿರೀಕ್ಷಕ ಹಾಗೂ ಗೋದಾಮಿನ ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಬಿಟ್ಟರೆ ಈ ಹಗರಣದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಯಾವುದೇ ಕಾನೂನುಕ್ರಮ ಕೈಗೊಂಡಿಲ್ಲ, ಈ ಪ್ರಕರಣವನ್ನು ಸಂಬಂಧಪಟ್ಟ ಇಲಾಖೆ ತನಿಖೆಯ ಹೊಣೆಯನ್ನು ಪೊಲೀಸರಿಗೊಪ್ಪಿಸಿ ಕೈತೊಳೆದುಕೊಂಡಿದ್ದಾರೆ ಎಂದು ತುಂಗಪ್ಪ ಬಂಗೇರ ಆರೋಪಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಗಮನ ಸೆಳೆದ ಹಿನ್ನಲೆಯಲ್ಲಿ ಈ ಹಗರಣ ಬೆಳಕಿಗೆ ಬರುವಂತಾಯಿತು.
ಇದು ಗಂಭೀರ ಪ್ರಕರಣವಾಗಿರುವುದರಿಂದ ಬೆಳಗಾವಿ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡುವುದಾಗಿ ಎಂದು ಅವರು ತಿಳಿಸಿದರು.
ಇಂತಹ ಅಕ್ಕಿ ಹಗರಣ ಬಂಟ್ವಾಳ ಮಾತ್ರವಲ್ಲ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯು ನಡೆಯುವ ಸಾಧ್ಯತೆ ಇದೆ ಎಂದು ಗುಮಾನಿ ವ್ಯಕ್ತಪಡಿಸಿದ ಅವರು ಕೇಂದ್ರ ಸರಕಾರ ಬಡ ಪಡಿತರದಾರರಿಗೆ ವಿತರಿಸುವ ಅಕ್ಕಿಯನ್ನು ಕಳ್ಳತನಗೈದು ದಂಧೆ ಮಾಡುವ ಜಾಲವನ್ನು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದ ನಾಗರಿಕ ಮತ್ತು ಆಹಾರ ಪೂರೈಕೆ ಸಚಿವರು ಕೂಡಲೇ ಈ ಅಕ್ಕಿ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು.
ಜಿಲ್ಲಾಡಳಿತ, ಮತ್ತು ಸರಕಾರ ಕಳ್ಳರ ಜೊತೆ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರೆ ತಾಲೂಕು ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು ಉಪಸ್ಥಿತರಿದ್ದರು.