ಬಂಟ್ವಾಳ ವರ್ತಕರ ವಿ. ಸ. ಸಂಘ “ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ” ನಿ.,ವಾಗಿ ನಾಮಾಂಕಿತ, ವಿಂಶತಿಗೆ ಚಾಲನೆ
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಕೇಂದ್ರಕಚೇರಿಯನ್ನು ಹೊಂದಿರುವ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.,ವು “ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ” ನಿ.,ವಾಗಿ ನಾಮಾಂಕಿತಗೊಂಡ ಹಿನ್ನಲೆಯಲ್ಲಿ ಹೆಸರಿನ ‘ನಾಮಫಲಕ ಅನಾವರಣ’ ಮತ್ತು ಸಂಸ್ಥೆಯ 20ನೇ ವರ್ಷ ಪೂರೈಸಿದ ಸವಿನೆನಪಿಗಾಗಿ “ವಿಂಶತಿ ಸಂಭ್ರಮ” ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ನ ಶ್ರೀಗುರುದೇವಾನಂದ ಸ್ವಾಮೀಜಿ ಅವರು ನಾಮಫಲಕ ಅನಾವರಣಗೈದು ಆಶೀರ್ವಚನವಿತ್ತರು.
ಧರ್ಮದ ಚೌಕಟ್ಟಿನಲ್ಲಿ ನಡೆಯುವ ವ್ಯವಹಾರದಿಂದಾಗುವ ಉಳಿಕೆಯಲ್ಲಿ ಆಪತ್ತು ಇಲ್ಲ. ಸುಧೀರ್ಘವಾದ ಅನುಭವ ಸಮರ್ಪಕ ಕಾರ್ಯ ನಿರ್ವಹಣೆಯಿಂದ ಗ್ರಾಹಕರಿಗೆ ಸೇವೆ ನೀಡಲು ಸಾಧ್ಯ ಎಂದ ಶ್ರೀಗಳು ಸಹಕಾರಿ ಕ್ಷೇತ್ರದಲ್ಲಿ ನಗುಮುಖದ ಸೇವೆಯು ಅಗತ್ಯವಿದೆ ಎಂದು ನುಡಿದರು.
ನವೀಕೃತ ಕೇಂದ್ರ ಕಚೇರಿಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಿ ಮಾತನಾಡಿ, 20 ವರ್ಷಗಳ ಹಿಂದೆ ಸಮಾನ ಮನಸ್ಕರನ್ನು ಸೇರಿಸಿಕೊಂಡು ಕಾರ್ಯ ಆರಂಭವಾದ ಸಂಘ ವರ್ತಕರ ವಿಶ್ವಾಸವನ್ನುಗಳಿಸಿ ದಡ ಸೇರಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ.ದ ಅಧಗಯಕ್ಷ ನಾಗೇಶ್ ಕಲ್ಲಡ್ಕ ಅವರು ಸಂಘದ ರಾಯಿ ಶಾಖಾ ವ್ಯವಸ್ಥಾಪಕರಿಗೆ ಸಹಕಾರಿ ಧ್ವಜ ಹಸ್ತಾಂತರಿಸುವ ಮೂಲಕ ವಿಶಂತಿ ಸಂಭ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಉದ್ಯಮಿ ಹಸನಬ್ಬ ಎಂ. ಎಚ್. ಕೈಕಂಬ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್, ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ನಿರ್ದೇಶಕ ರಾಜೇಶ್ ಬಿ., ಜೆ. ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸ್ವಪ್ನಾ ರಾಜರತ್ನ, ಹೇಮಂತ್ ಕುಮಾರ್ ಜೈನ್, ರವೀಂದ್ರ, ಡಾ| ಸುದೀಪ್ ಕುಮಾರ್, ಲೋಕೇಶ್ ಸುವರ್ಣ, ಬಟ್ಯಪ್ಪ ಶೆಟ್ಟಿ, ಜಯರಾಜ್ ಕಲ್ಲೇರಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಪ್ರಸ್ತಾವನೆಗೈದರು. ನಿರ್ದೇಶಕ ಮೈಕಲ್ ಡಿ’ಕೋಸ್ತಾ ಸ್ವಾಗತಿಸಿದರು. ನಾರಾಯಣ ಸಿ.ಪೆರ್ನೆ ವಂದಿಸಿದರು. ಸುಧಾಕರ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.