ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ 15 ನೇ ವರ್ಷದ ಉತ್ಸವ
ಬಂಟ್ವಾಳ: ಮಕ್ಕಳು ಪಠ್ಯದ ಜೊತೆಗೆ ಸ್ಕೌಟ್ಸ್ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಜೀವನ ಕೌಶಲಗಳ ಅನುಭವವನ್ನು ಪಡೆಯಬಹುದಲ್ಲದೆ ಸೇವಾ ಮನೋಭಾವವನ್ನು ಬೆಳೆಸುತ್ತದೆ, ಇಂತಹ ಕಲಿಕೆಯು ಬೆಳೆಯಲು ಸ್ಕೌಟ್ಸ್ ಸಂಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕಿ ಪ್ರತಿಮಾ ವೈ.ವಿ ರವರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ 15 ನೇ ವರ್ಷದ ವಾರ್ಷಿಕ ಸ್ಕೌಟ್ಸ್-ಗೈಡ್ಸ್ ಹಾಗೂ ಕಬ್ಸ್, ಬುಲ್-ಬುಲ್ಸ್ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮಾಸ್ಟರ್ ಶಿಕ್ಷಕಿ ಸ್ವಪ್ನ ಸ್ಕೌಟ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ.ಡಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ವೀರಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಚಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆಗೈದು ಶೃದ್ದಾಂಜಲಿ ಸಮರ್ಪಿಸಲಾಯಿತು.
ಗ್ರಾ.ಪಂ ಪಂಚಾಯತ್ ಸದಸ್ಯ ಧನಂಜಯ ಗೌಡ, ಮಾಣಿ ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಗಣೇಶ್, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ಸ್ವಾಗತ ಸಮಿತಿಯ ಅಧ್ಯಕ್ಷ ಜಯರಾಮ್ ರೈ ಕರಿಂಕ ಹೊಸಮನೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀದರ ಶೆಟ್ಟಿ, ಐ ಈ ಆರ್ ಟಿ ಸುರೇಖಾ, ಮಾಣಿ ಕ್ಲಸ್ಟರ್ ಸಿ ಅರ್ ಪಿ ಸತೀಶ್ ರಾವ್, ಸ್ಥಳೀಯ ಸ್ಕೌಟ್ಸ್-ಗೈಡ್ಸ್ ಕಾರ್ಯದರ್ಶಿ ಉಮ್ಮರಗಿ ಶರಣಪ್ಪ, ಸ್ಕೌಟ್ಸ್-ಗೈಡ್ಸ್ ನಿರ್ದೇಶಕ ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಮೊದಲಾದವರು ವೇದಿಕೆಯಲ್ಲಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸ್ಕೌಟ್ಸ್-ಗೈಡ್ಸ್ ಹಾಗೂ ಕಬ್ಸ್, ಬುಲ್ -ಬುಲ್ಸ್ ಮಕ್ಕಳ ವಿವಿಧ ಘೋಷಣೆಗಳೊಂದಿಗೆ ನಗರ ಮೆರವಣಿಗೆ ಮಾಡಲಾಯಿತು.
ನಂತರ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದೆ ಆಹಾರ ಹಾಗೂ ಪಾನೀಯ ತಯಾರಿಕೆ, ರಸದಿಂದ ಕಸ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಯ ಅಧ್ಯಕ್ಷರುಗಳು, ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆದಿಲ ಗಡಿಯಾರ ಶಾಲಾ ಶಿಕ್ಷಕ ಸದಾನಂದ ಕಾರ್ಯಕ್ರಮ ನಿರೂಪಿಸಿದರು.