ಬಂಟ್ವಾಳ:ತಾಲ್ಲೂಕಿನ ವಾಮದಪದವು ಗ್ರಾಮೀಣ ಪ್ರದೇಶದಲ್ಲಿ ಯುಜಿಸಿ ಮಾನ್ಯತೆ ಪಡೆದು ನಗರದ ಖಾಸಗಿ ಕಾಲೇಜುಗಳನ್ನೂ ಮೀರಿ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 29ರಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ರೂ.16ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಆವರಣಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಳೆದ 1992ರಲ್ಲಿ ಸ್ಥಳೀಯ ಕೃಷಿಕ ದಿ.ಸುಬ್ಬರಾವ್ ಡಿ.ಕೊಂಬ್ರಬೈಲು ಇವರು ಉಚಿತವಾಗಿ ನೀಡಿದ ಒಂದೂವರೆ ಎಕರೆ ಸೇರಿದಂತೆ ಒಟ್ಟು ಒಂಭತ್ತು ಎಕರೆ ಸರ್ಕಾರಿ ಜಮೀನಿನಲ್ಲಿ ರೂ 10ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮತ್ತು ವಿಶಾಲವಾದ ಕಟ್ಟಡ ಹೊಂದಿದೆ.

ಬಂಟ್ವಾಳ ತಾಲ್ಲೂಕಿನ ವಾಮದಪದವು ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೃಶ್ಯ.

28btl-vamadapadvu
ಒಟ್ಟು 516 ಮಂದಿ ವಿದ್ಯಾರ್ಥಿ  ಸಮೂಹ ಹೊಂದಿರುವ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್ ಸಹಿತ ಒಟ್ಟು 14 ಮಂದಿ ಸರ್ಕಾರಿ ಮತ್ತು 40 ಮಂದಿ ಗೌರವ ಉಪನ್ಯಾಸಕರಿದ್ದಾರೆ.
ಬಿ.ಎ., ಬಿ.ಕಾಂ., ಬಿಎಸ್ಸಿ, ಬಿಬಿಎಂ, ಬಿಎಸ್ಡಬ್ಲ್ಯು, ಎಂ.ಎ.ಕನ್ನಡ ಸ್ನಾತಕೋತ್ತರ ಪದವಿ ನೀಡಲಾಗುತ್ತಿದ್ದು, ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಅಂಚೆ ತೆರಪಿನ ಶಿಕ್ಷಣ ವ್ಯವಸ್ಥೆಯನ್ನೂ ಒದಗಿಸಿದೆ.
ಕಳೆದ 2013ರಲ್ಲಿ ಯುಜಿಸಿ ಮಾನ್ಯತೆ ಪಡೆದ ಕಾಲೇಜು ಪ್ರಸಕ್ತ ನ್ಯಾಕ್ ತಂಡದಿಂದ ‘ಎ’ ಗ್ರೇಡ್ ಪಡೆಯುವ ಎಲ್ಲಾ ಅರ್ಹತೆಯನ್ನೂ ಗಳಿಸಿದೆ. ಸರ್ಕಾರದ ಅನುದಾನ ಪಡೆಯದೆ ರೂ 3ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ‘ಮಲ್ಟಿಜಿಮ್’ ಇಲ್ಲಿನ ವಿದ್ಯಾರ್ಥಿಗಳನ್ನು ಸದೃಢ ಮತ್ತು ಆರೋಗ್ಯಪೂರ್ಣ ಯುವಶಕ್ತಿಯಾಗಿ ರೂಪಿಸಿದ್ದು, ಇನ್ಫೋಸಿಸ್ ಸಂಸ್ಥೆ ಒದಗಿಸಿದ ಒಟ್ಟು 25 ಉಚಿತ ಕಂಪ್ಯೂಟರ್ ಇವರ ಕಲಿಕೆ ಗುಣಮಟ್ಟವನ್ನು ಹೆಚ್ಚಿಸಿದೆ.
ಸುಸಜ್ಜಿತ ಗ್ರಂಥಾಲಯ ಹೊಂದಿದ್ದು, ಪ್ರಸಕ್ತ ಯುಜಿಸಿ ಯೋಜನೆಯಡಿ ಒಟ್ಟು ರೂ 1.86 ಕೋಟಿ, ನಾಲ್ಕು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ರೂ.1ಕೋಟಿ, ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ರೂ 22ಲಕ್ಷ, ಹೀಗೆ ಒಟ್ಟು ರೂ 4ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ನಡುವೆ ‘ವಿಜ್ಞಾನ ಮಾದರಿ ಕಾಲೇಜು’ ಯೋಜನೆಯಡಿ ಕಾಲೇಜು ಆಯ್ಕೆಯಾಗಿ ರೂ 2ಕೋಟಿ ಹೆಚ್ಚುವರಿ ಅನುದಾನ ದೊರೆಯಲಿದೆ. ಕಾಲೇಜಿನಲ್ಲಿ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲ್ಲರಿಗೂ ಸಮವಸ್ತ್ರ ಮತ್ತು ಬಿಸಿಯೂಟ ಇಲ್ಲಿನ ವಿಶೇಷತೆಯಾಗಿದೆ.
ಕಬಡ್ಡಿ ಮತ್ತು ಹ್ಯಾಂಡ್ ಬಾಲ್ ಮತ್ತಿತರ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದಾರೆ.
ಇದರಿಂದಾಗಿ ಈ ಕಾಲೇಜಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸಚಿವ ಬಿ.ರಮಾನಾಥ ರೈ ಅವರು ಈಗಾಗಲೇ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸುಸಜ್ಜಿತ ಸಕರ್ಾರಿ ವಿದ್ಯಾರ್ಥಿ ನಿಲಯ ಆರಂಭಿಸಿರುವುದು ಪ್ರತೀ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಕಾಲೇಜಿನ ಅಭಿವೃದ್ಧಿಗೆ ಇಲ್ಲಿನ ಉಪನ್ಯಾಸಕರ ಜೊತೆಗೆ ಹಳೆವಿದ್ಯಾರ್ಥಿ  ಸಂಘ, ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಸ್ಥಳೀಯ ದಾನಿಗಳು ಸಹಕರಿಸುತ್ತಿದ್ದಾರೆ.
ಮುಂಬರುವ ವರ್ಷದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಕಳೆದ 8 ವರ್ಷಗಳಲ್ಲಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಾ ಇದೇ 30ರಂದು ನಿವೃತ್ತಿಗೊಳ್ಳಲಿರುವ ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್  ಸುದ್ದಿ9ಗೆ ತಿಳಿಸಿದ್ದಾರೆ.

.ಮೋಹನ್ ಕೆ.ಶ್ರೀಯಾನ್

By suddi9

Leave a Reply

Your email address will not be published. Required fields are marked *