ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ; ಮಕ್ಕಳಿಗೆ ತಿನಿಸು ತಯಾರಿಸಲು ತಂದಿರಿಸಲಾಗಿದ್ದ ಸಾವಿರಾರು ರೂ. ಮೌಲ್ಯದ ಸಾಮಾಗ್ರಿ ಕಳವು
ಬಂಟ್ವಾಳ: ಮಕ್ಕಳ ಪೌಷ್ಟಿಕಾಂಶ ಪಡೆಯುವಿಕೆ ಮತ್ತು ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಸರಕಾರ ಜಾರಿ ಮಾಡಿದ ಅಂಗನವಾಡಿ ಕೇಂದ್ರವನ್ನೂ ಬಿಡದ ಕಳ್ಳರು, ಅಂಗನವಾಡಿಯೊಂದಕ್ಕೆ ನುಗ್ಗಿ ಅಲ್ಲಿ ಮಕ್ಕಳಿಗೆ ತಿನಿಸುಗಳನ್ನು ತಯಾರಿಸಲು ತಂದಿರಿಸಲಾಗಿದ್ದ ಸಾವಿರಾರು ರೂಪಾಯಿ ಮೌಲ್ಯದ ವಿವಿಧ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬೊಂಡಾಲ ಎಂಬಲ್ಲಿ ನಡೆದಿದೆ.

ಪಾಣೆಮಂಗಳೂರು ಗ್ರಾಮದ ಬೊಂಡಾಲ ಸಮೀಪದ ಶಾಂತಿ ಗುಡ್ಡೆ ಎಂಬಲ್ಲಿನ ಅಂಗನವಾಡಿಯಿಂದ ಸುಮಾರು ೭ ಸಾವಿರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ದೇವಕಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಂಗನವಾಡಿಯಲ್ಲಿದ್ದ ಅಲ್ಯುಮಿನಿಯಂ ಕುಕ್ಕರ್ ೧೦ ಲೀ-೧ ಅಂದಾಜು ಮೌಲ್ಯ ೧೫೦೦/- ರೂ, ಅಲ್ಯುಮಿನಿಯಂ ಕುಕ್ಕರ್ ೫ ಲೀ-೧ ಅಂದಾಜು ಮೌಲ್ಯ ೧೦೦೦/- ರೂ, ಅಲ್ಯುಮಿನಿಯಂ ಡಬ್ಬ ಹಾಗೂ ಮುಚ್ಚಳ-೨ ಅಂದಾಜು ಮೌಲ್ಯ ೩೦೦೦/- ರೂ, ರೂ, ೧೦೦೦/- ರೂ ನಗದು ಹಾಗೂ ದಿನಸಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ೧೩೪/೨೦೨೩ ಕಲಂ: ೪೫೪, ೪೫೭, ೩೮೦ ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.