ಮಾದಕ ಮುಕ್ತ ತುಂಬೆ ಗ್ರಾಮವನ್ನಾಗಿಸಲು ಸಂಕಲ್ಪ ನ.1 ರಿಂದ ದ.31 ರವರೆಗೆ ಅಭಿಯಾನ
ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ನೇತೃತ್ವ ಎಂ.ಜೆ.ಎಂ.ತುಂಬೆ ಮಾದಕ ಮುಕ್ತ ಅಭಿಯಾನ ಸಮಿತಿಯ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನವು ನವಂಬರ್ 1 ರಿಂದ ದಶಂಬರ್ 31 ರವರೆಗೆ ನಡೆಯಲಿದೆ ಎಂದು ತುಂಬೆ ಮಾದಕ ಮುಕ್ತ ಅಭಿಯಾನ ಸಮಿತಿ ಸಂಚಾಲಕ ಬಿ.ಅಬ್ದುಲ್ ಕಬೀರ್ ತಿಳಿಸಿದ್ದಾರೆ.
ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,”ಮಾದಕ ವ್ಯಸನ ನಿಲ್ಲಿಸೋಣ, ಗೌರವದ ಜೀವನ ಸಾಗಿಸೋಣ” ಹಾಗೂ “ನಮ್ಮ ಜಮಾತಿನ ನಡೆ ಮಾದಕ ಮುಕ್ತ ತುಂಬೆಯ ಕಡೆ” ಎಂಬ ಧ್ಯೇಯವಾಕ್ಯದೊಂದಿಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಇದರ ಪ್ರಯುಕ್ತ ನ.3 ರಂದು ಮಧ್ಯಾಹ್ನ ಕುನಿಲ್ ಶಾಲೆಯಿಂದ ತುಂಬೆ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ. ಈ ಜಾಥದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಗ್ರಾ.ಪಂ., ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿವೆ ಬಳಿಕ ಸರ್ವಧರ್ಮದ ಪ್ರಮುಖರು ಜಾಗೃತಿ ಸಂದೇಶ ನೀಡಲಿದ್ದಾರೆ ಎಂದ ಅವರು ಬಳಿಕ ಎರಡು ತಿಂಗಳ ಕಾಲ ತುಂಬೆ ಗ್ರಾಮದ ಪ್ರತಿ ಮನೆಗೂ ಜಾಗೃತಿ ಸಂದೇಶದ ಕರಪತ್ರ ವಿತರಣೆ, ಮಾಹಿತಿ ಶಿಬಿರಗಳು, ಕಾರ್ನರ್ ಮೀಟಿಂಗ್ಸ್, ಕೌನ್ಸಿಲಿಂಗ್, ಜನಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ತುಂಬೆ ಈಗಾಗಲೇ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಶಿಕ್ಷಣ ಸಂಸ್ಥೆ, ಧಾರ್ಮಿಕ, ಸಾಮಾಜಿಕ ಕೇಂದ್ರಗಳು, ಆಸ್ಪತ್ರೆ, ಕೈಗಾರಿಕಾ ಸಂಸ್ಥೆಗಳನ್ನು ಹೊಂದಿದ್ದು, ಮಂಗಳೂರು ನಗರಕ್ಕು ಸಾಮೀಪ್ಯವನ್ನು ಹೊಂದಿದೆ.
ಉನ್ನತ ಹುದ್ದೆ, ಉನ್ನತ ಶಿಕ್ಷಣ ಪಡೆದವರು, ಪ್ರತಿಷ್ಠಿತ, ಗಣ್ಯರು ತುಂಬೆ ಗ್ರಾಮದಲ್ಲಿ ವಾಸ್ತವ್ಯವಿದ್ದಾರೆ. ತುಂಬೆ ಗ್ರಾಮವನ್ನು ಮಾದಕ ಮುಕ್ತ ಗ್ರಾಮವನ್ನಾಗಿಸಬೇಕೆಂಬ ಸಂಕಲ್ಪವನ್ನು ತುಂಬೆ ಜಮಾತ್ ತೊಟ್ಟಿರುವ ಹಿನ್ನಲೆಯಲ್ಲಿ ಸ್ಥಳೀಯರು ಸಮಿತಿಯನ್ನು ರಚಿಸಿಕೊಂಡು ಮಾದಕ ವ್ಯಸನದ ವಿರುದ್ದ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳ ಸಹಿತ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಂದಾಗಿದ್ದೆವೆ ಎಂದರು.
ಸುದ್ದಿ ಗೋಷ್ಟಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಮಹಮ್ಮದ್ ಇಂತಿಯಾಜ್, ಮಹಮ್ಮದ್ ಇರ್ಫಾನ್ ತುಂಬೆ, ಇಲ್ಯಾಸ್, ತುಂಬೆ ಗ್ರಾ.ಪಂ.ಸದಸ್ಯ ಝಹೂರ್ ಅಹಮ್ಮದ್ ಉಪಸ್ಥಿತರಿದ್ದರು.