ಅ.26, 27 ರಂದು ಮಂಗಳಾ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ
ಬಂಟ್ವಾಳ: ದ.ಕ.ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ತುಂಬೆ ಪ್ರೌಢಶಾಲೆ ಇದರ ಸಂಯುಕ್ತಾಶ್ರಯದಲ್ಲಿ ” ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವು ಅ.26 ಮತ್ತು 27 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ತುಂಬೆ ಪ.ಪೂ.ಕಾಲೇಜಿನ ಪ್ರಾಂಶುಪಾಲ ಗಂಗಾಧರ ರೈ ಅವರು ಮೊದಲ ದಿನದಂದು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ 1250 ಕ್ರೀಡಾಪಟುಗಳು ಹಾಗೂ 250 ಅಧಿಕಾರಿಗಳು ಮತ್ತು ಎರಡನೇ ದಿನದಂದು1000 ಕ್ರೀಡಾಪಟುಗಳು ಹಾಗೂ 250 ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾಕೂಟವನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪಾಡಿ, ಆಶೋಕ ರೈ ಪುತ್ತೂರು, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದ ಅವರು ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಮಂಗಳೂರಿನ ಮಂಗಳಾ ಕ್ರೀಡಾಂಗಣದ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಇದರಿಂದಾಗಿ ಕ್ರೀಡಾಪಟುಗಳಿಗೆ ಹೊಸ ಅನುಭವ ಹಾಗೂ ಕ್ರೀಡಾ ಸಾಧನೆಗೆ ಅನುಕೂಲವಾಗಲಿದೆ ಎಂದರು. ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿರುವ ಹಿನ್ನಲೆಯಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದೆ.
ಸಿಂಥೆಟೆಕ್ ಟ್ರ್ಯಾಕ್ ನಲ್ಲಿ ಕ್ರೀಡಾಕೂಟದ ಅನುಭವದಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಜಿಲ್ಲೆ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ವು ಅನುಕೂಲವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ನಾರಾಯಣ ಭಟ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಾಥಮಿಕ ಶಾಲೆಗೆ ಸಂಬಂಧಿಸಿ 2 ವಿಭಾಗ ಹಾಗೂ ಪ್ರೌಢಶಾಲೆಗೆ ಸಂಬಂಧಿಸಿ 4 ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ ಒಟ್ಟು 74 ಕ್ರೀಡೆಗಳು ಎರಡು ದಿನದಲ್ಲಿ ನಡೆಯುವುದು ಎಂದ ಅವರು ಪಂಚಾಯತ್ ಮೂಲಕ ಶಾಲಾ ಕ್ರೀಡಾಪಟುಗಳಿಗೆ ವಿವಿಧ ಸವಲತ್ತು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದಿರುವುದರಿಂದ ಜಿಲ್ಲೆಯ ಇತರೆ ತಾಲೂಕಿನ ಕ್ರೀಡಾಂಗಣಕ್ಕೆ ಮೊರೆ ಹೋಗಬೇಕಾಗಿದೆ. ಬಂಟ್ವಾಳ ದೈಹಿಕ ಶಿಕ್ಷಕರ ಸಂಘ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ನಮ್ಮ ಸಂಘದ ಮನವಿಯ ಹಿನ್ನಲೆಯಲ್ಲಿ ಬೆಂಜನಪದವಿನಲ್ಲಿ ಕ್ರೀಡಾಂಗಣಕ್ಕೆ ಜಮೀನು ಮಂಜೂರಾಗಿದೆ. ಅದಕ್ಕೆ ಬೇಕಾದ ಅನುದಾನ ಬಿಡುಗಡೆಯಾಗದಿರುವುದರಿಂದ ಇನ್ನು ಕಾರ್ಯಗತಗೊಂಡಿಲ್ಲ ಎಂದು ಜಗದೀಶ್ ರೈ ಅವರು ತಿಳಿಸಿದರು. ತುಂಬೆ ಶಾಲೆಯ ಅಬ್ದುಲ್ ಕಬೀರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.