ಗುಣಾತ್ಮಕ ಶಿಕ್ಷಣಕ್ಕೆ ಮಹತ್ವಕೊಡಿ: ಡಾ.ಅನುರಾಧ ಕುರುಂಜಿ
ಬಂಟ್ವಾಳ: ಇಂದಿನ ಯುವ ಜನತೆ ಯಾಂತ್ರೀಕೃತ ಜೀವನದಿಂದ ಹೊರ ಬರಬೇಕಾದರೆ ಎನ್.ಎಸ್.ಎಸ್ ಕಾರ್ಯ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು.ಕೇವಲ ಅಂಕಗಳಿಕೆಗಾಗಿ ಅಧ್ಯಯನವನ್ನು ಮೀಸಲಿಡದೆ ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ಕೊಡಬೇಕೆಂದು ವ್ಯಕ್ತಿತ್ವ ವಿಕಸನ ತರಬೇತುದಾರ ಡಾ.ಅನುರಾಧ ಕುರುಂಜಿ ತಿಳಿಸಿದರು.
ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಸುಯೋಗ ವರ್ಧನ್ ಡಿ.ಎಮ್. ರವರು ವಹಿಸಿ ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಪೂರಕವಾದ ಎನ್.ಎಸ್.ಎಸ್. ರೀತಿಯ ಪಠ್ಯೇತರ ವಿಷಯಗಳಲ್ಲಿ ತೊಡಗಿಕೊಂಡಲ್ಲಿ ಕ್ರಿಯಾಶೀಲರಾಗಿರಲು ಸಾಧ್ಯ ಎಂದರು.
ನೂತನವಾಗಿ ಆಯ್ಕೆಯಾದ ಎನ್.ಎಸ್.ಎಸ್. ಘಟಕ ವಿದ್ಯಾರ್ಥಿ ನಾಯಕ ಹೇಮಲತಾ ಮತ್ತು ಪ್ರತೀಕ್ ನಾಯ್ಕ್ ಉಪಸ್ಥಿತರಿದ್ದರು.ಶ್ರದ್ಧಾ ಮತ್ತು ತಂಡದವರು ಪ್ರಾರ್ಥಿಸಿದರು.ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಸ್ವಾಗತಿಸಿದರು,ಸಹ ಕಾರ್ಯಕ್ರಮಾಧಿಕಾರಿ ಕಿಟ್ಟು ರಾಮಕುಂಜ ವಂದಿಸಿದರು.ಉಪನ್ಯಾಸಕಿ ಸಂಪ್ರೀತಾ ನಿರೂಪಿಸಿದರು.ಬಳಿಕ ಸಂಪನ್ಮೂಲವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವು ನಡೆಯಿತು.